ಡಿಸಿಎಂ ಡಿಕೆಶಿ ಹೇಳಿಕೆ (ETV Bharat) ರಾಮನಗರ:ನಾವು ಮೂಲ ಬೆಂಗಳೂರಿನವರು. ಹಿಂದೆ ನಾವು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜಿ.ಪಂ ಸದಸ್ಯ ಆಗಿದ್ದೆ. ನನ್ನ ಹೆಸರು ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್. ನನ್ನ ಹೆಸರು ಬದಲಾವಣೆ ಮಾಡಲು ಆಗುತ್ತದೆಯೇ..! ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆಯಾದರೆ ವಿಶ್ವ ಮಟ್ಟದಲ್ಲಿ ಹೆಸರು ಬರಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಮಾತನಾಡಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣ ನಡೆದ ಸರ್ಕಾರಿ ನೌಕರರ ಸಂಘದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಆ ಗೌರವ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿಗೂ ಸಿಗಬೇಕು ಎನ್ನುವುದೇ ನಮ್ಮ ಗುರಿಯಾಗಿದೆ. ಇದಕ್ಕಾಗಿ ಸಿಎಂ ಬಳಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ವಿಪಕ್ಷದವರು ಟೀಕೆ ಮಾಡುತ್ತಿದ್ದಾರೆ. ನಾನೇನು ರಿಯಲ್ ಎಸ್ಟೇಟ್ ಮಾಡಬೇಕಾಗಿಲ್ಲ ಎಂದರು.
ನನ್ನ ಆಸ್ತಿ ಮೌಲ್ಯ ಜೋರಾಗಿದೆ. ನಾನೇ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಜಮೀನು ದಾನ ಮಾಡಿದ್ದೇನೆ. ಅಧಿಕಾರ ಇದ್ದಾಗ ಜನರಿಗೆ ಏನಾದ್ರೂ ಮಾಡಬೇಕು. ಜನರಿಗೆ ತಮ್ಮ ಆಸ್ತಿ ಮೌಲ್ಯ ಹೆಚ್ಚಿಸಿ ಆರ್ಥಿಕ ಶಕ್ತಿ ತುಂಬಬೇಕು. ಹಾಗಾಗಿ ಜಿಲ್ಲೆಯ ಹೆಸರು ಬದಲಾವಣೆ ಮಾಡುತ್ತಿದ್ದೇವೆ. ಇದನ್ನ ಕ್ಯಾಬಿನೆಟ್ನಲ್ಲಿ ಸಿಎಂ ಚರ್ಚೆ ಮಾಡುತ್ತೇವೆ ಅಂದಿದ್ದಾರೆ. ರಾಮನಗರವನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೇ ಮಾಡುತ್ತೇವೆ. ರಾಮನಗರ ಜಿಲ್ಲಾ ಕೇಂದ್ರ ಇದ್ದೇ ಇರುತ್ತದೆ. ಹೆಸರು ಮಾತ್ರ ಬದಲಾವಣೆ ಆಗುತ್ತದೆ ಎಂದು ಡಿಸಿಎಂ ತಿಳಿಸಿದರು.
ಹಿಂದೆ ನಾನು ಯಾಮಾರಿಬಿಟ್ಟೆ. ಇನ್ಮುಂದೆ ಯಾಮಾರುವುದಿಲ್ಲ. ಚನ್ನಪಟ್ಟಣ ಜನತೆಗೆ ನ್ಯಾಯ ಒದಗಿಸುತ್ತೇವೆ. ಮನೆ ಬಾಗಿಲಿಗೆ ಬಂದು ಚನ್ನಪಟ್ಟಣ ಜನತೆಯ ಸಮಸ್ಯೆ ಆಲಿಸಿದ್ದೇವೆ. ಎಲ್ಲರಿಗೂ ಮನೆ, ನಿವೇಶನ ಕೊಡುವ ಕೆಲಸ ಮಾಡುತ್ತೇವೆ. ಇದರಲ್ಲಿ ಸರ್ಕಾರಿ ನೌಕರರ ಸಹಕಾರ ಕೂಡ ಮುಖ್ಯವಾಗಿದೆ. ನಾನು, ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕೂಡ ಸರ್ಕಾರಿ ನೌಕರರಾಗಿದ್ದಾರೆ. ಹಿಂದೆ ನಾನು ಜಿ.ಪಂ ಸದಸ್ಯ, ಹಾಗೂ ಅವರು ಕಾರ್ಪೋರೇಟರ್ ಆಗಿದ್ದರು. ಬಳಿಕ ನಾವಿಬ್ಬರು 8 ಬಾರಿ ಶಾಸಕರಾಗಿದ್ದೀವಿ. ಆಗಲೂ ಜೊತೆಗಿದ್ದೆವು, ಮುಂದೆಯೂ ಜೊತೆಗೆ ಇರುತ್ತೇವೆ ಎಂದರು.
ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ ಬಹಳ ಮುಖ್ಯವಾಗಿದೆ. ವ್ಯವಸ್ಥೆಯ ಬಹುದೊಡ್ಡ ಪಿಲ್ಲರ್ ಸರ್ಕಾರಿ ನೌಕರರು. ಸರ್ಕಾರದ ಕೆಲಸ ದೇವರ ಕೆಲಸ ಅಂತ ವಿಧಾನಸೌದಲ್ಲಿ ಬರೆಯಲಾಗಿದೆ. ಜನರ ಸಮಸ್ಯೆಗಳನ್ನ ಬಗೆಹರಿಸಿದಾಗ ನಿಮ್ಮಲ್ಲಿ ಅವರು ದೇವರನ್ನ ಕಾಣುತ್ತಾರೆ. ನಿಮ್ಮನ್ನ ಸ್ಮರಿಸುವ ಕೆಲಸವನ್ನ ಜನ ಮಾಡುತ್ತಾರೆ. ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳ ಜನರಿಗೆ ಸ್ಪಂದಿಸುವುದರ ಮೇಲೆ ಸರ್ಕಾರಕ್ಕೆ ಗೌರವ ಬರುತ್ತದೆ ಎಂದರು.
ನಿಮಗೆ ಈಗ 7ನೇ ವೇತನ ಆಯೋಗ ಜಾರಿ ಮಾಡಿದ್ದೇವೆ. ಹಿಂದೆ 6ನೇ ವೇತನ ಆಯೋಗವನ್ನೂ ನೀಡಿದ್ದು ಕೂಡಾ ನಾವೇ. ರಾಜ್ಯದ ಜನತೆಗೆ 5 ಗ್ಯಾರಂಟಿ ಕೊಟ್ಟಿದ್ದೇವೆ. ಅದರಂತೆ ನಿಮಗೆ 6ನೇ ಗ್ಯಾರಂಟಿ ನೀಡಿದ್ದೇವೆ. ಒಟ್ಟು 12 ಲಕ್ಷ ಕುಟುಂಬಕ್ಕೆ ನ್ಯಾಯ ಕೂಡಿಸುವ ಕೆಲಸ ಮಾಡಿದ್ದೇವೆ. ಎನ್ಪಿಎಫ್, ಓಪಿಎಸ್ ವಿಚಾರವಾಗಿಯೂ ನಿಮ್ಮ ಬೇಡಿಕೆ ಇದೆ. ಅದರ ಬಗ್ಗೆಯೂ ಚರ್ಚೆ ಮಾಡುತ್ತೇವೆ. ನಿಮಗೆ ಅವಕಾಶ ಸಿಕ್ಕಾಗ ಜನರ ಹೃದಯವನ್ನ ಗೆಲ್ಲುವ ಕೆಲಸ ಮಾಡಿ. ನಿಮ್ಮ ಹಾಗೆ ನಾನೂ ಕೂಡಾ ನೌಕರನಾಗಿದ್ದೇನೆ. ನಿಮ್ಮ ಮೇಲೆ ಹೇಗೆ ಕೇಸ್ ಹಾಕ್ತಾರೋ, ನಮ್ಮ ಮೇಲೂ ಹಾಕುತ್ತಾರೆ ಎಂದರು.
ಬಿಜೆಪಿ ಸರ್ಕಾರ ನನ್ನ ಮೇಲೆ ಕೇಸ್ ಹಾಕಿದ್ದಾರೆ: ಬಿಜೆಪಿ ಸರ್ಕಾರದವರು ನನ್ನ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿದ್ದು, ಕೊಡಬಾರದ ನೋವು ಕೊಟ್ಟಿದ್ದಾರೆ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದರು. ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾರ್ಮಿಕವಾಗಿ ಮಾತನಾಡಿ, ನಾನು ಅವರ ಪಾರ್ಟಿ ವಿಚಾರಕ್ಕೆ ಎಂಟ್ರಿ ಆಗಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅದು ಅವರ ಮಧ್ಯೆ ಇತ್ಯರ್ಥ ಆಗಬೇಕಿದೆ. ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ. ಈಗ ಚನ್ನಪಟ್ಟಣದಲ್ಲಿ 50 ಎಕರೆಯಷ್ಟು ಭೂಮಿ ಹುಡುಕಲಾಗಿದೆ. ಬಡವರಿಗೆ ಸೈಟ್ ಕೊಡಲು ಸರ್ವೆ ಮಾಡಿಸಲಾಗುತ್ತಿದೆ. ಈಗ ಅಧಿಕಾರ ಇದೇ, ಜನರಿಗೆ ಒಳ್ಳೆಯದನ್ನ ಮಾಡೋಣ ಎಂದರು.
ಜೆಡಿಎಸ್ ಹಾಗೂ ಬಿಜೆಪಿಯವರು ಹಿಂದೆ ಕಿತ್ತಾಡಿದ್ದರು, ನಂತರ ಒಂದಾದರು. ಈಗ ಕಿತ್ತಾಡುತ್ತಿದ್ದಾರೆ, ಮತ್ತೆ ಒಂದಾಗಲ್ಲ ಎಂಬುದು ಯಾವ ಗ್ಯಾರಂಟಿ ಎಂದು ಹೆಚ್ಡಿಕೆ - ಯೋಗೇಶ್ವರ್ ನಡುವಿನ ಅಸಮಾಧಾನ ಕುರಿತು ಇದೇ ವೇಳೆ ಡಿಕೆಶಿ ವ್ಯಂಗ್ಯವಾಡಿದರು.
ಓದಿ:ನಾನು ಜಗ್ಗಲ್ಲ, ಬಗ್ಗಲ್ಲ, ನಿಮ್ಮನ್ನು ಬಗ್ಗು ಬಡಿಯುವೆ : ಸಿಎಂ ಸಿದ್ದರಾಮಯ್ಯ ಶಪಥ - CM Siddaramaiah Statement