ಬೆಂಗಳೂರು : ನಾನು ಯೋಗೇಶ್ವರ್ ಅವರನ್ನು ಭೇಟಿನೂ ಮಾಡಿಲ್ಲ, ಮಾತನಾಡಿಯೂ ಇಲ್ಲ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ. ಪಿ ಯೋಗೇಶ್ವರ್ ಕಾಂಗ್ರೆಸ್ ನಾಯಕರ ಭೇಟಿ ಸಂಬಂಧ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಧ್ವಜರೋಹಣ ಮಾಡೋ ಸಂದರ್ಭದಲ್ಲಿ ಅವರಿಗೆ ಕೊಡೋ ಗೌರವ ಕೊಡಲಾಗಿದೆ. ಅಷ್ಟು ಬಿಟ್ರೆ ಬೇರೆನೂ ಇಲ್ಲ. ಕುಮಾರಸ್ವಾಮಿಗೆ ರಾಜಕಾರಣ ಗೊತ್ತು. ವೈಯಕ್ತಿಕ ರಾಜಕಾರಣ. ಒಂದು ಪಾರ್ಟಿ ರಾಜಕಾರಣನೇ ಒಂದು. ನಂಗೂ ಬೇಕಾದಷ್ಟು ಮಾಹಿತಿ ಇದೆ. ಕೆಲವರಿಗೆ ಸಲಹೆ ಕೊಡಬಹುದು. ಅವರಲ್ಲಿ ಗೊಂದಲ ಇರೋದು ಗೊತ್ತಿಲ್ಲ. ಅದು ಜೆಡಿಎಸ್ ಕ್ಷೇತ್ರ, ಬಿಜೆಪಿಗೆ ಕೊಟ್ರೆ ಅವರ ಅಸ್ತಿತ್ವ ಇರಲ್ಲ. ಕುಮಾರಸ್ವಾಮಿ ಅವರು ಸಿಟ್ಟಿಂಗ್ ಎಂಎಲ್ಎ ಆಗಿದ್ದರು. ಹಿಂದೆ ಅವರ ಭಾಮೈದುನ ಹಾಕಿ ಗೆಲ್ಲಿಸಿದ್ದು ಗೊತ್ತಿದೆ ಎಂದರು.
ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದರು (ETV Bharat) ನಾನು ಎನ್‌ಡಿಎ ವಿಚಾರ, ಯೋಗೇಶ್ವರ್ ವಿಚಾರಕ್ಕೆ ಹೋಗಲ್ಲ. ಕುಮಾರಸ್ವಾಮಿ ಏನು ಮಾತನಾಡ್ತಾರೆ, ಅವರ ಮಾತಿಗೆ ಅವರೇ ಸ್ಟ್ಯಾಂಡ್ ಕೊಡಲ್ಲ. ಅವರಿಗೆಲ್ಲ ನಾನು ಉತ್ತರ ಕೊಡುವುದಕ್ಕೆ ಹೋಗಲ್ಲ. ಅದು ಅವರ ಡ್ಯೂಟಿ ಅಥವಾ ಪಕ್ಷದ ತಂತ್ರ ಇರಬಹುದು. ಪಬ್ಲಿಕ್ ಅಲ್ಲಿ ಒಂದು ಮಾತನಾಡ್ತಾರೆ, ಆಂತರಿಕವಾಗಿ ಒಂದು ಮಾತನಾಡ್ತಾರೆ ಎಂದು ಟೀಕಿಸಿದರು.
ಚನ್ನಪಟ್ಟಣದಿಂದ ಕಾಂಗ್ರೆಸ್ ಪಾಳಯದಲ್ಲಿ ನಂದೇ ಮುಖ, ಕ್ಷೇತ್ರದಲ್ಲಿ ಜೆಡಿಎಸ್ ವೀಕ್ ಅಂತ ತಿಳಿದರೆ ನನ್ನಷ್ಟು ಮೂರ್ಖ ಯಾರೂ ಇಲ್ಲ. ಆದರೆ ಕುಮಾರಸ್ವಾಮಿ ಇಷ್ಟು ವೀಕ್ ಅಂತಾ ಭಾವಿಸಿರಲಿಲ್ಲ. ಎಲ್ಲರ ಹತ್ತಿರ ಮಾತನಾಡಿ ಕೈ ಕಟ್ಟಿ, ಬಿಜೆಪಿ ಅವರನ್ನು ರಿಕ್ವೆಸ್ಟ್ ಮಾಡಿ, ಅವರೊಬ್ಬ ಸೆಂಟ್ರಲ್ ಮಿನಿಸ್ಟರ್. ಇಷ್ಟೊಂದು ವೀಕ್ ಅಂತಾ ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಅಭ್ಯರ್ಥಿಗಳ ಹೆಸರು ಬಹುತೇಕ ಫೈನಲ್ :ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಮಾತನಾಡಿ, ಬಹುತೇಕ ಎಲ್ಲಾ ಅಂತಿಮ ಮಾಡಿದ್ದೇವೆ. ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ, ಅವರು ನೋಡಿಕೊಳ್ತಾರೆ. ನಮ್ಮ ಪ್ರಸ್ತಾವನೆಯನ್ನು ದೆಹಲಿಗೆ ಕಳುಹಿಸುತ್ತೇವೆ. ದೆಹಲಿ ನಾಯಕರು ಅಂತಿಮ ತೀರ್ಮಾನ ಮಾಡ್ತಾರೆ ಎಂದರು.
ನಿನ್ನೆ ಸಿಎಂ ನಿವಾಸದಲ್ಲಿ ಸಚಿವರ ಸಭೆ ವಿಚಾರವಾಗಿ ಮಾತನಾಡಿ, ನಿನ್ನೆ ಸಿಎಂ ಜೊತೆಗಿನ ಸಭೆಯಲ್ಲಿ ಬಹುತೇಕ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದೇವೆ. ಏನು ಅಭಿಪ್ರಾಯ ಬೇಕು ಅದನ್ನು ನಮ್ಮ ಸಚಿವರನ್ನು ಕೇಳಿದ್ದೇವೆ. ಅವರಿಗೂ ಜವಾಬ್ದಾರಿ ಕೊಟ್ಟಿದ್ದೇವೆ. ಎಲೆಕ್ಷನ್ ಕಮಿಟಿ ಸಭೆ ಕರೆಯೋ ಬದಲು, ಕ್ಯಾಬಿನೆಟ್ ಮಿನಿಸ್ಟರ್ಸ್ ಹಾಗೂ ಯಾರಿಗೆ ಜವಾಬ್ದಾರಿ ವಹಿಸಿದ್ವಿ ಅವರನ್ನೆಲ್ಲ ಕೇಳಿದ್ದೇವೆ. ನಮ್ಮ ಪ್ರಸ್ತಾವನೆಯನ್ನು ದೆಹಲಿಗೆ ಕಳಿಸಿಕೊಡುತ್ತೇವೆ. ಹೈಕಮಾಂಡ್ ಆಕಾಂಕ್ಷಿಗಳ ಜೊತೆ ವೈಯಕ್ತಿಕವಾಗಿಯೂ ಮಾತನಾಡುತ್ತಾರೆ. ಆ ಬಳಿಕ ತೀರ್ಮಾನ ಮಾಡುತ್ತಾರೆ. ಸಿಂಗಲ್ ಹೆಸರು ಕಳಿಸಿದ್ದೇವೆಯೋ, ಎಷ್ಟು ಅರ್ಜಿ ಬಂದಿವೆ ಎಂಬುದನ್ನು ಬಹಿರಂಗಪಡಿಸುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಡಿ. ಕೆ ಸುರೇಶ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಿಜ ನಮ್ಮ ಕಾರ್ಯಕರ್ತರು ಹೇಳ್ತಾ ಇದ್ದಾರೆ. ಪಾರ್ಟಿ ಹೈ ಕಮಾಂಡ್ ಏನು ಹೇಳ್ತಾರೆ ಅದೇ ಫೈನಲ್. ಲೋಕಸಭೆ ಫಲಿತಾಂಶದ ಶಾಕ್ನಿಂದ ಇನ್ನೂ ಹೊರಬಂದಿಲ್ಲ. ಸುರೇಶ್ ಅವರ ಸೋಲು ನಮಗೆ ಆಘಾತ ತಂದಿದೆ. ಅದು ಚಿಕ್ಕ ಅಂತರ ಆಗಿದ್ರೆ ಪರವಾಗಿರಲಿಲ್ಲ ಎಂದು ಹೇಳಿದರು.
ಸಂಜೆ ಬೆಂಗಳೂರು ರೌಂಡ್ಸ್ : ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸಾರ್ವಜನಿಕರೂ ಕೂಡ ಸಹಕಾರ ನೀಡಿ ಎಂದು ಕೇಳಿಕೊಳ್ತೇನೆ. ಬಿಬಿಎಂಪಿ ಇಂಜಿನಿಯರ್ಗಳನ್ನು ಕರೆಸಿ ಮಾತನಾಡಿದ್ದೇನೆ. ಎಲ್ಲೆಲ್ಲಿ ನೀರು ನಿಂತಿದೆ ತಕ್ಷಣ ಕ್ಲಿಯರ್ ಮಾಡಿ ಅಂತ ಹೇಳಿದ್ದೇನೆ. ನಾನೂ ರೌಂಡ್ಸ್ ಹೋಗಬೇಕಿತ್ತು. ಆದರೆ ಅಧಿಕಾರಿಗಳು ಒಂದೇ ಕಡೆ ಬಂದರೆ, ಕೆಲಸ ವಿಳಂಬ ಆಗುತ್ತದೆ ಅಂತ ಬೇಡ ಅಂತ ನಿರ್ಧರಿಸಿದೆ. ಸಂಜೆ ಬೆಂಗಳೂರು ರೌಂಡ್ಸ್ ಮಾಡುತ್ತೇನೆ. ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅದಕ್ಕೆ ಏನು ಮಾಡಬೇಕು ಅಂತ ಚರ್ಚೆ ಮಾಡ್ತೇವೆ ಎಂದರು.
ಮಳೆ ಅವಾಂತರ ಸಂಬಂಧ ಬಿಬಿಎಂಪಿ ಚೀಫ್ ಇಂಜಿನಿಯರ್ ಕರೆಸಿ ಮಾತಾಡಿದ್ದೇನೆ. ಎಲ್ಲೆಲ್ಲಿ ನೀರು ತುಂಬಿಕೊಂಡಿದೆ ಅಲ್ಲೆಲ್ಲಾ ಬೇಗ ಕ್ಲಿಯರ್ ಮಾಡುವಂತೆ ಸೂಚನೆ ಕೊಟ್ಟಿದ್ದೇನೆ. ರಾತ್ರಿ ಎಲ್ಲಾ ಮಳೆ ಬಂದು ಸಮಸ್ಯೆ ಆಗಿದೆ. ನಾನು ಕಂಟ್ರೋಲ್ ರೂಮ್ನಲ್ಲಿ ಮಾಹಿತಿ ತೆಗೆದುಕೊಂಡಿದ್ದೇನೆ. ತಗ್ಗು ಪ್ರದೇಶಗಳಲ್ಲಿ ಒಂದೊಂದೇ ಪ್ರದೇಶದಲ್ಲಿ ಕ್ಲಿಯರ್ ಮಾಡ್ತೇವೆ. ಎಲ್ಲೆಲ್ಲಿ ಸಮಸ್ಯೆ ಆಗ್ತಿದೆ ಅಂತ ಜನ ಕೂಡ ಮಾಹಿತಿ ಒದಗಿಸಲಿ. ಎಲ್ಲವನ್ನೂ ಒಂದೊಂದೆ ಕ್ಲಿಯರ್ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ :ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ