ಬೆಂಗಳೂರು :ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಭವಿಷ್ಯವಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅರಿವಾಗಿದೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು, ನಾಯಕರ ಸಹಕಾರ ಸಿಕ್ಕಿದೆ ಎಂದು ಹೇಳಿದ್ದು, ಎನ್ಡಿಎ ಮೈತ್ರಿಕೂಟವನ್ನು ಜನ ತಿರಸ್ಕರಿಸಿದ್ದಾರೆ? ಎಂಬ ಹೇಳಿಕೆ ಬಗ್ಗೆ ಕೇಳಿದಾಗ ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದರು.
“ಕಳೆದ ವರ್ಷದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ಈ ಉಪಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿನ ಮತಗಳ ಅಂತರವನ್ನು ಗಮನಿಸಿ. ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರದಲ್ಲಿ 50 ಸಾವಿರ ಮತಗಳು ಬದಲಾಗಿವೆ. ಚನ್ನಪಟ್ಟಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 16 ಸಾವಿರ ಮತಗಳನ್ನು ಪಡೆದಿದ್ದರು. ಈ ಉಪಚುನಾವಣೆಯಲ್ಲಿ 1.12 ಲಕ್ಷ ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನಮಗೆ ಮತ ಹಾಕದಿದ್ದರೆ ಇಷ್ಟು ಪ್ರಮಾಣದಲ್ಲಿ ಮತಗಳು ವ್ಯತ್ಯಾಸವಾಗುತ್ತಿತ್ತೇ? ಆಮೂಲಕ ಜನ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿಸಿದರು.
ತಮ್ಮ ಹುಳುಕು ಮುಚ್ಚಿಕೊಳ್ಳಲು ಬಿಜೆಪಿ ಹೋರಾಟ: ಬಿಜೆಪಿ ಅವಧಿಯಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ನೋಟಿಸ್ ನೀಡಿ ಈಗ ಅವರೇ ಹೋರಾಟ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಅವರಿಗೆ ಬೇಕಾಗಿರುವುದು ಕೇವಲ ಪ್ರಚಾರ. ಅವರು ಪ್ರತಿಭಟನೆ ಮಾಡಿದಷ್ಟು ನಮಗೆ ಒಳ್ಳೆಯದು. ಅವರು ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ಹೇಳಿದ್ದೇನೆ'' ಎಂದರು.
''ಗೋಮುಖ ವ್ಯಾಘ್ರರ ಸತ್ಯಾಂಶವನ್ನು ನಾವು ಬಿಚ್ಚಿಡುತ್ತೇವೆ. ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಅಲ್ಲಿನ ಜನ ಪಹಣಿಯಲ್ಲಿ ವಕ್ಫ್ ನಮೂದಾಗಿರುವ ವಿಚಾರವಾಗಿ ಅರ್ಜಿ ತೆಗೆದುಕೊಂಡು ಹೋಗುತ್ತಿದ್ದರು. ನಾನು ಅದನ್ನು ಪರಿಶೀಲಿಸಿದಾಗ 2020ರಲ್ಲಿ ಅವರ ಪಹಣಿ ತಿದ್ದುಪಡಿಯಾಗಿದೆ. ಈಗ ಅದನ್ನು ಮನೆ ಮನೆಗೆ ತೋರಿಸುತ್ತಿದ್ದಾರೆ. ಬಿಜೆಪಿಯವರು ತಮ್ಮ ಆಂತರಿಕ ಹುಳುಕು ಮುಚ್ಚಿಕೊಳ್ಳಲು ಈ ವಿಚಾರವಾಗಿ ಹೋರಾಟ ಮಾಡುತ್ತಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ” ಎಂದು ತಿಳಿಸಿದರು.
ಬಿಜೆಪಿಯಲ್ಲಿ ಬಣ ರಾಜಕೀಯ ಹೆಚ್ಚಾಗಿದ್ದು, ಅವರವರೇ ಪರಸ್ಪರ ದೂರು ನೀಡುತ್ತಿದ್ದಾರೆ ಎಂದು ಕೇಳಿದಾಗ, “ಅವರೇ ಈ ವಿಚಾರ ತೀರ್ಮಾನ ಮಾಡಿಕೊಳ್ಳಬೇಕು. ಅವರ ಪಕ್ಷದಲ್ಲಿ ಎಷ್ಟೇ ಗುಂಪಿದ್ದರೂ ನಮ್ಮ ಲೆಕ್ಕಕ್ಕೆ ಅವರು ಒಂದೇ ಗುಂಪು. ಜೆಡಿಎಸ್ ಚಿಹ್ನೆ ಬೇರೆಯಾದರೂ ಅವರೂ ಅದೇ ಗುಂಪು. ಜೆಡಿಎಸ್ ಅವರು ಕೂಡ ಅದೇ ಪ್ರಯತ್ನದಲ್ಲಿದ್ದಾರೆ. ಅವರು ಹೋರಾಟ ಮಾಡಿ ನಮಗೆ ಪ್ರಚಾರ ನೀಡುತ್ತಿದ್ದು, ಮಾಡಲಿ” ಎಂದು ತಿಳಿಸಿದರು.
ಮುಸಲ್ಮಾನರ ಮತ ಕೇಳುವ ನೈತಿಕತೆ ಇಲ್ಲ : ಮುಸಲ್ಮಾನರು ಕೈಕೊಟ್ಟಿದ್ದಕ್ಕೆ ನಮಗೆ ಹಿನ್ನಡೆಯಾಯಿತು ಎಂಬ ನಿಖಿಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, “ಕುಮಾರಸ್ವಾಮಿ ಬಿಜೆಪಿಯವರ ಜತೆ ಸೇರಿದರೆ ಮುಸಲ್ಮಾನರು ಹೇಗೆ ಮತ ಹಾಕುತ್ತಾರೆ. ಮುಸಲ್ಮಾನರನ್ನು ಎನ್ಡಿಎ ಮೈತ್ರಿಕೂಟ ವಿಶ್ವಾಸಕ್ಕೆ ಪಡೆದಿಲ್ಲ. ಹೀಗಿರುವಾಗ ಅವರು ಯಾಕೆ ಮತ ಹಾಕುತ್ತಾರೆ. ನೀವು ಅವರಿಗೆ ನೆರವಾಗಿದ್ದರೆ, ಎನ್ಡಿಎ ವತಿಯಿಂದ ಮುಸಲ್ಮಾನರಿಗೆ ಟಿಕೆಟ್ ನೀಡಿದ್ದಾರಾ? ಮಂತ್ರಿ ಮಾಡಿದ್ದಾರಾ? ಅವರಿಗಾಗಿ ಕಾರ್ಯಕ್ರಮ ಕೊಟ್ಟಿದ್ದಾರಾ? ಅವರಿಗಿದ್ದ ಶೇ4ರಷ್ಟು ಮೀಸಲಾತಿ ಕಿತ್ತುಕೊಂಡಿದ್ದೀರಿ. ನಿಮಗೆ ಅವರ ಮತ ಕೇಳುವ ನೈತಿಕತೆಯೇ ಇಲ್ಲ. ನಿಖಿಲ್ ಪಾಪ ಚಿಕ್ಕ ಹುಡುಗ. ಅವನ ಅನುಭವದ ಬಗ್ಗೆ ನಾನು ಮಾತನಾಡುವುದಿಲ್ಲ. ಈ ವಿಚಾರವಾಗಿ ದೊಡ್ಡ ಗೌಡರು ಮಾತನಾಡಬೇಕು” ಎಂದು ಹೇಳಿದರು.
ಚಕ್ರವರ್ತಿಗಳೇ ಬಿದ್ದಿದ್ದಾರೆ: ದೇಶದಲ್ಲಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ ಎಂಬ ಜೆಡಿಎಸ್ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ, “ಅವರು ತಮ್ಮ ಪರಿಸ್ಥಿತಿ ಬಗ್ಗೆ ನೋಡಿಕೊಳ್ಳಲಿ. ನಾನು ಇಲ್ಲವಾದರೂ ಕಾಂಗ್ರೆಸ್ಗೆ ಏನೂ ಆಗುವುದಿಲ್ಲ. ಯಾರೇ ಹೋದರೂ ಕಾಂಗ್ರೆಸ್ ಪಕ್ಷಕ್ಕೆ ಏನೂ ಆಗುವುದಿಲ್ಲ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷ ತ್ಯಾಗ ಮಾಡಿ ಈ ದೇಶವನ್ನು ಒಗ್ಗಟ್ಟಾಗಿಟ್ಟಿದೆ. ಪ್ರಪಂಚದಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳೇ ಬಿದ್ದಿದ್ದಾರೆ. ಸದ್ದಾಂ ಹುಸೇನ್, ಪಾಕಿಸ್ತಾನದ ಕತೆ ಏನಾಯ್ತು ಎಂದು ಎಲ್ಲರಿಗೂ ಗೊತ್ತು ಎಂದು ತಿಳಿಸಿದರು.
ಮನನೊಂದು ಜಿಟಿಡಿ ಹೇಳಿಕೆ : ಜಿ. ಟಿ ದೇವೇಗೌಡರ ನೇತೃತ್ವದಲ್ಲಿ ಆಪರೇಷನ್ ಮಾಡಲಾಗುವುದೇ? ಎಂಬ ಪ್ರಶ್ನೆಗೆ, ಜಿ. ಟಿ ದೇವೇಗೌಡ ಹಿರಿಯ ನಾಯಕರು. ಅವರು ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದಾರೆ. ಅವರು ಜೆಡಿಎಸ್ ಪಕ್ಷಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾವು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೆವು. ಆದರೆ ಅವರು ಕುಮಾರಣ್ಣ ಅವರನ್ನು ಸಿಎಂ ಮಾಡುತ್ತೇವೆ ಎಂದು ನಮ್ಮ ಆಹ್ವಾನ ತಿರಸ್ಕರಿಸಿದರು. ಈಗ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಅವರು ನೊಂದಿದ್ದಾರೆ ಎಂದರು.
ಇದನ್ನೂ ಓದಿ :ಮಹಾರಾಷ್ಟ್ರದಲ್ಲಿ ಗೃಹಲಕ್ಷ್ಮಿ ಯೋಜನೆ ನಕಲು ಮಾಡಿ ಬಿಜೆಪಿ ಗೆದ್ದಿದೆ: ಡಿಸಿಎಂ ಡಿ.ಕೆ.ಶಿವಕುಮಾರ್