ಬೆಂಗಳೂರು/ನವದೆಹಲಿ: ''ಕಳಸಾ ಬಂಡೂರಿ ನಾಲೆ ಯೋಜನೆ ವಿಚಾರದಲ್ಲಿ ಕೇಂದ್ರ ಸಚಿವರು ಮಧ್ಯಪ್ರವೇಶ ಮಾಡಿ, ಅಗತ್ಯವಿರುವ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು'' ಎಂದು ಬೃಹತ್ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರಿಗೆ ಮನವಿ ಮಾಡಿದರು.
ನವದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಡಿಕೆಶಿ, ಈ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಪತ್ರದ ಸಾರಾಂಶ ಹೀಗಿದೆ, ''ದಿನಾಂಕ 09-10-2024ರಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ತನ್ನ 80ನೇ ಸಭೆಯಲ್ಲಿ ಕರ್ನಾಟಕದ ಅರ್ಜಿ ವಿಚಾರಣೆಯನ್ನು ಮುಂದೂಡಿ, ಈ ವಿಚಾರವಾಗಿ ಇರುವ ಕಾನೂನು ಸಮಸ್ಯೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ರಾಜ್ಯವು ದಿನಾಂಕ 10-10-2024 ಹಾಗೂ 16-10-2024 ದಿನಾಂಕದಂದು ಅಗತ್ಯ ಸ್ಪಷ್ಟನೆಯನ್ನು ಪತ್ರದ ಮೂಲಕ ಸಲ್ಲಿಕೆ ಮಾಡಲಾಗಿದೆ''.
''ಕಳಸಾ ನಾಲೆ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 10.6852 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಸುತ್ತಲಿನ ಹಳ್ಳಿಗಳ ಪ್ರದೇಶವನ್ನು ಇದು ಹೊಂದಿದೆ. ಇದರಲ್ಲಿ ಜಾಕ್ ವೆಲ್ ಸಹಿತ ಪಂಪ್ ಹೌಸ್, ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಾಣ ಮಾಡಲಾಗುವುದು. ಸ್ಥಾಯಿ ಸಮಿತಿಯ 80ನೇ ಸಭೆ ಚರ್ಚೆಯಾದ ಅಂಶಗಳು: ಗೋವಾದ ವನ್ಯಜೀವಿ ಮಂಡಳಿ ಮುಖ್ಯಸ್ಥರು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 29 ಅನ್ನು ಪ್ರಸ್ತಾಪಿಸಿ ಈ ಯೋಜನೆ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ರಾಜ್ಯವು ಸುಪ್ರೀಂ ಕೋರ್ಟ್ ಮುಂದೆ ಸೂಕ್ತ ದಾಖಲೆಗಳನ್ನು ಮಂಡಿಸಿದೆ''.
ಇದನ್ನೂ ಓದಿ:ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ: ನಟ ಶಿವರಾಜ್ಕುಮಾರ್
''ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ತಜ್ಞರ ಸಮಿತಿ ರಚಿಸಿತ್ತು. ಈ ತಂಡ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತನ್ನ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಪ್ರಾಧಿಕಾರವು ಮಹದಾಯಿ ನೀರು ವಿವಾದ ನ್ಯಾಯಾಧೀಕರಣ ತೀರ್ಪಿನ ಬಗ್ಗೆ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವಣ ಕಾನೂನು ಸಮರ ಸುಪ್ರೀಂಕೋರ್ಟ್ನಲ್ಲಿದೆ ಎಂದು ತಿಳಿಸಿತ್ತು. ಈ ಎಲ್ಲಾ ವಿಚಾರವಾಗಿ ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದು, ಸುಪ್ರೀಂಕೋರ್ಟ್ ಈ ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದರ ಜೊತೆಗೆ ಕಾನೂನು ಪ್ರಕಾರವಾಗಿ ಕೇಂದ್ರ ಸರ್ಕಾರದ ಎಲ್ಲಾ ಅನುಮತಿಗಳು ಸಿಕ್ಕ ನಂತರವಷ್ಟೇ ಈ ಯೋಜನೆ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿದೆ'' ಎಂದು ತಿಳಿಸಿದರು.