ಬೆಂಗಳೂರು:''ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದರೂ ನಾನು ಗೆದ್ದಂತೆ, ಸೋತರೂ ನಾನು ಸೋತಂತೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ''ಚುನಾವಣೋತ್ತರವಾಗಿ ನಡೆದಿರುವ ಮೂರು ಸಮೀಕ್ಷೆಗಳ ಫಲಿತಾಂಶ ಉಲ್ಟಾ ಆಗಲಿದೆ. ಆ ಸಮೀಕ್ಷೆ ಸುಳ್ಳಾಗಲಿದೆ. ರಾಜ್ಯ ವಿಧಾನಸಭೆ ಚುನಾವಣೆ, ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಸಮೀಕ್ಷೆ ಸುಳ್ಳಾಗಿವೆ. ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲ್ಲಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
''ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ. ಗೆದ್ದರೂ ನಾನು ಗೆದ್ದಂತೆ, ಸೋತರೂ ನಾನು ಸೋತಂತೆ. ಯೋಗೇಶ್ವರ್ಗೆ ಟಿಕೆಟ್ ಕೊಟ್ಟಿರುವುದೇ ನಾನು. ನನ್ನ ಮುಖ ಇಟ್ಟುಕೊಂಡೆ ಚುನಾವಣೆ ಮಾಡಿದ್ದೇನೆ. ನಾನು ಘೋಷಣೆ ಮಾಡಿದ ನಂತರ ಕುಮಾರಸ್ವಾಮಿ ಅವರು ಕೂಡ ನಾನು ಅಭ್ಯರ್ಥಿ ಎಂದು ಹೇಳಿಕೊಂಡಿದ್ದರು. ಚನ್ನಪಟ್ಟಣದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ನಾವಿದ್ದೇವೆ'' ಎಂದರು.
ಎಐಸಿಸಿ ನಾಯಕರಿಂದ ಸೂಚನೆ ಬಂದಿಲ್ಲ:ನಾಳೆ ಮಹಾರಾಷ್ಟ್ರ ಹಾಗೂ ಜಾರ್ಖಂಡ್ನಲ್ಲಿ ಅತಂತ್ರ ವಿಧಾನಸಭೆಯಾದರೆ ಶಾಸಕರನ್ನು ಕರೆತರುತ್ತೀರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ಈ ವಿಚಾರವಾಗಿ ಎಐಸಿಸಿಯ ಯಾವುದೇ ನಾಯಕರು ನನ್ನನ್ನು ಸಂಪರ್ಕ ಮಾಡಿಲ್ಲ. ಅವರು ಈ ವಿಚಾರವಾಗಿ ನನ್ನನ್ನು ಸಂಪರ್ಕಿಸಿದರೆ ಬೇರೆ ವಿಚಾರ. ಈಗಿನವರೆಗೂ ನಮ್ಮಲ್ಲಿ ಅಂತಹ ಯಾವುದೇ ಆಲೋಚನೆಗಳಿಲ್ಲ. ನಾಳೆ ಮಾಧ್ಯಮಗಳಲ್ಲಿ ಬರುವ ಫಲಿತಾಂಶ ವರದಿಯನ್ನು ನೋಡುವುದಷ್ಟೇ ನಮ್ಮ ಮುಂದಿರುವ ಆಯ್ಕೆ'' ಎಂದು ತಿಳಿಸಿದರು.
''ನನ್ನ ಪ್ರಕಾರ ರೆಸಾರ್ಟ್ ರಾಜಕಾರಣ ಹೊರತಾಗಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ನಮ್ಮಲ್ಲಿ ಚರ್ಚೆಯಾಗಿಲ್ಲ. ಅಲ್ಲಿನ ಶಾಸಕರು, ಪ್ರಜ್ಞಾವಂತರಿದ್ದಾರೆ. ಸಮಸ್ಯೆಯಾಗುವುದಿಲ್ಲ. ಜನ ನಮಗೆ ಮತ ನೀಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಾಳೆ ನೀವು ನಮಗೆ ಸಿಹಿ ಸುದ್ದಿ ಕೊಡಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಹೇಳಿದರು.
ಬಿಜೆಪಿ ವಿರುದ್ಧ ಮಾನಹಾನಿ ಪ್ರಕರಣ:ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸುಳ್ಳು ಪ್ರಚಾರ ಮಾಡಿರುವ ಬಗ್ಗೆ ದೂರು ದಾಖಲಿಸುವ ಬಗ್ಗೆ ಪ್ರತಿಕ್ರಿಯಿಸಿ, ''ಖಂಡಿತವಾಗಿಯೂ ದೂರು ದಾಖಲಿಸುತ್ತೇವೆ. ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಈ ವಿಚಾರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಿಜೆಪಿ ನಾಯಕರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಪರಿಶೀಲನೆ ನಡೆಸಲು ಆಹ್ವಾನಿಸಿ ಜಾಹೀರಾತನ್ನು ನೀಡಿದ್ದೆ. ಈಗ ನಾವು ಅವರ ಮೇಲೆ ಮಾನಹಾನಿ ಪ್ರಕರಣ ದಾಖಲಿಸುತ್ತೇವೆ'' ಎಂದರು.
ಜಮೀರ್ ಅವರ ವಿರುದ್ಧ ಕ್ರಮದ ಬಗ್ಗೆ ಪ್ರತಿಕ್ರಿಯಿಸುತ್ತಾ, ''ನಾನು ವೈಯಕ್ತಿಕವಾಗಿ ಜಮೀರ್ ಜೊತೆ ಮಾತನಾಡಿದ್ದೇನೆ. ಅವರು ಪಕ್ಷದ ಪ್ರಮುಖ ನಾಯಕರು. ಭಾವನಾತ್ಮಕವಾಗಿ ಅವರು ಮಾತನಾಡಿದ್ದಾರೆ. ಅವರ ಹೇಳಿಕೆ ತಪ್ಪು ಎಂದು ನಾನು ಹಾಗೂ ಮುಖ್ಯಮಂತ್ರಿಗಳು ಹೇಳಿದ್ದೇವೆ. ಈ ವಿಚಾರವನ್ನು ನಾವು ಪಕ್ಷದ ಆಂತರಿಕವಾಗಿ ಚರ್ಚೆ ಮಾಡುತ್ತೇವೆ, ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ'' ಎಂದು ತಿಳಿಸಿದರು.