ಬೆಂಗಳೂರು/ಮೈಸೂರು:ಪೆಂಗಲ್ ಚಂಡಮಾರುತದ ಪರಿಣಾಮನಿರಂತರ ಮಳೆ ಸುರಿಯುತ್ತಿದ್ದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ (ದ್ವಿತೀಯ ಪಿಯುಸಿ ವರೆಗೆ) ರಜೆ ಘೋಷಣೆ ಮಾಡಲಾಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲಾಡಳಿತಗಳು ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿವೆ.
ಮೈಸೂರು ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ .ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ತಿಳಿಸಿದ್ದಾರೆ.
ಚಾಮರಾಜನಗರದಲ್ಲೂ ರಜೆ ಘೋಷಣೆ:ಫೆಂಗಲ್ ಚಂಡಮಾರುತ ಹಿನ್ನೆಲೆ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದಾರೆ. ಪರೀಕ್ಷೆ ನಡೆಯುತ್ತಿರುವ ಪದವಿ ಕಾಲೇಜುಗಳಿಗೆ ಹೊರತು ಪಡಿಸಿ ರಜೆ ಘೋಷಣೆ ಮಾಡಲಾಗಿದೆ. ಇಂದಿನ ರಜೆ ಅವಧಿಯನ್ನು ಭಾನುವಾರ ತರಗತಿ ನಡೆಸಿ ಸರಿದೂಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಾದಪ್ಪನ ಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಂ:ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ಮಲೆ ಮಹದೇಶ್ವರ ಬೆಟ್ಟ ರಸ್ತೆಯ ಆನೆ ತಲೆದಿಂಬ ಎಂಬಲ್ಲಿ ಮರಬಿದ್ದು ತಡರಾತ್ರಿ ನಾಲ್ಕು ತಾಸು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಕಾರ್ಯಾಚರಣೆ ನಡೆಸಿ ತೆರವು ಮಾಡಿ ಮತ್ತೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಮಾವಾಸ್ಯೆ ಹಿನ್ನೆಲೆ ಸಹಸ್ರಾರು ಮಂದಿ ಭಕ್ತರು ದೇಗುಲಕ್ಕೆ ಆಗಮಿಸಿದ್ದರು.