ದಾವಣಗೆರೆ: ಮದ್ಯಪಾನ ಬಿಟ್ಟು ಬಿಡು ಎಂದು ತಿಳಿ ಹೇಳಿದ ಕಾರಣಕ್ಕೆ ಹೆಂಡತಿಯನ್ನು ಕೊಲೆ ಮಾಡಿದ್ದ ಪತಿಗೆ ಇಲ್ಲಿನ ಎರಡನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್.ಎನ್ ಅವರು ಆರೋಪಿ ಗಿರೀಶ್ಗೆ (32 ವಯಸ್ಸು) ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಮೃತರ ಪರವಾಗಿ ಸರ್ಕಾರಿ ವಕೀಲರಾದ ಜಯ್ಯಪ್ಪ ಅವರು ವಾದ ಮಂಡಿಸಿದ್ದರು.
ಪ್ರಕರಣ ಹಿನ್ನೆಲೆ: 2021ರ ಆಗಸ್ಟ್ 28ರಂದು ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದ ಗಿರೀಶ್ಗೆ ಆತನ ಪತ್ನಿ ಶಿಲ್ಪಾ ಮದ್ಯಪಾನ ಚಟ ಬಿಡುವಂತೆ ಒತ್ತಾಯಿಸುತ್ತಿದ್ದರು. ಈ ಸಂಬಂಧ ಗಂಡ- ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತಿತ್ತು. ಈ ಗಲಾಟೆ ವಿಕೋಪಕ್ಕೆ ತಿರುಗಿದ ಪರಿಣಾಮ ಆರೋಪಿ ಗಿರೀಶನು ಶಿಲ್ಪಾಳನ್ನು ಕೊಲೆ ಮಾಡಿದ್ದ. ಈ ಪ್ರಕರಣ ಸಂಬಂಧ ಶಿಲ್ಪಾಳ ತಂದೆ ದುರ್ಗಪ್ಪ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.