ಕರ್ನಾಟಕ

karnataka

ETV Bharat / state

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭದಾಸೆ ತೋರಿಸಿ ವಂಚನೆ: ₹10.45 ಕೋಟಿ ಕಳ್ಕೊಂಡ ಮಹಿಳೆ! - WOMAN LOST CRORES

10 ಕೋಟಿ ರೂ.ಗೂ ಹೆಚ್ಚು ಹಣವನ್ನು ಮಹಿಳೆ ಹಂತಹಂತವಾಗಿ ಹೂಡಿಕೆ ಮಾಡಿದ್ದರು. ಆದರೆ ಕೊನೆಗೊಂದಿನ ಅಧಿಕ ಲಾಭದಾಸೆಯಿಂದ ತಾವು ಮೋಸ ಹೋಗಿರುವುದು ಗೊತ್ತಾಗಿದೆ.

CEN Police Station
ದಾವಣಗೆರೆ ಸಿಇಎನ್​ ಪೊಲೀಸ್​ ಠಾಣೆ (ETV Bharat)

By ETV Bharat Karnataka Team

Published : Nov 13, 2024, 12:03 PM IST

Updated : Nov 13, 2024, 2:23 PM IST

ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಸೆಗೆ ಬಿದ್ದು ಮಹಿಳೆಯೊಬ್ಬರು 10.45 ಕೋಟಿ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆಯ ವಿಜಯಲಕ್ಷ್ಮಿ ಎಂಬವರು ವಂಚನೆಗೊಳಗಾದವರು.

"ಷೇರು ಕಂಪನಿಯೊಂದರಲ್ಲಿ ಆನ್‌ಲೈನ್‌ ಮೂಲಕ ಹಂತ ಹಂತವಾಗಿ 10,45,50,000 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಂದ ಹೂಡಿಕೆ ಮಾಡಿದ್ದೆ. ಲಾಭಾಂಶ ತೋರಿಸಿದ ಹಣವನ್ನು ವಿತ್​ ಡ್ರಾ ಮಾಡಲು ಯತ್ನಿಸಿದಾಗ ಹಣ ವಿತ್ ಡ್ರಾ ಆಗಲಿಲ್ಲ. ಈ ಸಂದರ್ಭದಲ್ಲಿ ನಾನು ಮೋಸ ಹೋಗಿರುವುದು ಗೊತ್ತಾಯಿತು.‌ ಕಂಪನಿಯನ್ನು ಹುಡುಕಿಕೊಂಡು ಮುಂಬೈಗೆ ತೆರಳಿದ್ದೆ. ಅದೂ ಕೂಡ ಪ್ರಯೋಜನ‌ವಾಗಲಿಲ್ಲ" ಎಂದು ದೂರಿನಲ್ಲಿ ವಿಜಯಲಕ್ಷ್ಮಿ ತಿಳಿಸಿದ್ದಾರೆ. ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.

ಹೂಡಿಕೆ 10.45 ಕೋಟಿ, ಲಾಭಾಂಶ ತೋರಿಸಿದ್ದು 23 ಕೋಟಿ:ವಿಜಯಲಕ್ಷ್ಮಿ ಅವರು 10.45 ಕೋಟಿ ಹಣ ಹೂಡಿಕೆ ಮಾಡಿದ್ದು, ಷೇರು ಮಾರುಕಟ್ಟೆಯ ಖಾತೆಯಲ್ಲಿ 23 ಕೋಟಿ ರೂಪಾಯಿ ಎಂದು ತೋರಿಸುತ್ತಿತ್ತು. ಹೂಡಿಕೆಯೊಂದಿಗೆ ಹೆಚ್ಚುವರಿಯಾಗಿ ಬಂದ ಹಣವೂ ಸೇರಿದಂತೆ ಎಲ್ಲ ಹಣವನ್ನು ಬಿಡಿಸಿಕೊಳ್ಳಲು ಮುಂದಾದಾಗ ಕಂಪನಿಯವರು ಅರ್ಧಕ್ಕೆ ಹಣವನ್ನು ಡ್ರಾ ಮಾಡಿಕೊಳ್ಳಲು ಬರುವುದಿಲ್ಲ, ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಹಣ ಡ್ರಾ ಮಾಡಲು ಆಯ್ಕೆಯೇ ನೀಡದಿದ್ದಾಗ ವಂಚನೆಗೊಳಗಾಗಿರುವ ಬಗ್ಗೆ ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಿಂದ ನಿರಂತರ ಜಾಗೃತಿ:ದಾವಣಗೆರೆ ಜಿಲ್ಲಾ ಪೊಲೀಸ್​ನಿಂದ ಆನ್​ಲೈನ್ ವಂಚನೆ ಪ್ರಕರಣ, ಡಿಜಿಟಲ್ ಅರೆಸ್ಟ್, ಷೇರು ಹೂಡಿಕೆ ಪ್ರಕರಣ ಸೇರಿದಂತೆ ಈ ರೀತಿಯ ವಂಚನೆ ಪ್ರಕರಣಗಳ ಬಗ್ಗೆ ಎಸ್ಪಿ ಡಾ.ಉಮಾಪ್ರಶಾಂತ್ ಹಾಗು ಸಿಬ್ಬಂದಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಜನ ಆನ್​ಲೈನ್​ ವಂಚನೆ, ಷೇರು ಹೂಡಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಇಲಾಖೆಯೂ ಹೇಳಿದೆ.

ವಂಚನೆ ಪ್ರಕರಣ ಸಿಐಡಿಗೆ ವರ್ಗಾವಣೆ:ಈ ಕುರಿತುದೂರವಾಣಿ ಮೂಲಕ 'ಈಟಿವಿ ಭಾರತ್' ಜೊತೆ ಮಾತನಾಡಿದ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್, "ವಿಜಯಲಕ್ಷ್ಮಿ ಎಂಬವರು 10.45 ಕೋಟಿ ರೂ. ವಂಚನೆಗೊಳಗಾಗಿದ್ದಾರೆ. ಈಗಾಗಲೇ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂರು ಕೋಟಿ ರೂ ಮೇಲ್ಪಟ್ಟ ಹಣ ವಂಚನೆ‌ ನಡೆದರೆ ಅಂತಹ ಪ್ರಕರಣಗಳು ಸಿಐಡಿಗೆ ವರ್ಗಾವಣೆ ಆಗುತ್ತವೆ. ಆದ್ದರಿಂದ ಈಗಾಗಲೇ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಎಫ್ಐಆರ್ ಮಾತ್ರ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಡೇಟಿಂಗ್ ಆ್ಯಪ್​​ನ ವಿದೇಶಿ 'ನಕಲಿ ಸಖ'ನಿಂದ ₹18 ಲಕ್ಷ ಕಳೆದುಕೊಂಡ ಏಮ್ಸ್​ ವೈದ್ಯೆ

Last Updated : Nov 13, 2024, 2:23 PM IST

ABOUT THE AUTHOR

...view details