ದಾವಣಗೆರೆ: ದಾವಣಗೆರೆ ನಗರದ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಥೀಮ್ ಪಾರ್ಕ್ ಸಿದ್ಧವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದೂವರೆ ಎಕರೆಯಲ್ಲಿ ನಿರ್ಮಾಣ ಆಗಿರುವ ಥೀಮ್ ಪಾರ್ಕ್ ಸಾರ್ವಜನಿಕ ವೀಕ್ಷಣೆಗೆ ಹಾಗೂ ಗ್ರೀಕ್ ಶೈಲಿಯ ಬಯಲು ರಂಗಮಂದಿರದ ಬಳಕೆಗೆ ಇಂದಿನಿಂದ (ಡಿ.1) ಅವಕಾಶ ಕಲ್ಪಿಸಲಾಗಿದೆ.
ಶಾಲಾ ಮಕ್ಕಳಿಗೂ ಉಪಯುಕ್ತವಾಗಿರುವ ಈ ಪಾರ್ಕ್ಗೆ ಬೆಳಗ್ಗೆ 10 ರಿಂದ ಸಂಜೆ 6 ರ ತನಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಟಿಕೆಟ್ ದರವನ್ನು ಜನರಿಗೆ ಹೊರೆಯಾಗದಂತೆ ಪುಟ್ಟ ಮಕ್ಕಳಿಗೆ 10 ರೂ. ಹಾಗೂ ವಯಸ್ಕರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಆಕರ್ಷಕ ಕಲಾಕೃತಿಗಳು:ಥೀಮ್ ಪಾರ್ಕ್ನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಗ್ರಾಮೀಣ ಜನರ ಬದುಕು, ದೇಸಿ ಕ್ರೀಡೆಗಳ ಕಲರವ, ದಾವಣಗೆರೆ ಜನರ ಸಂಪ್ರಾಯದ, ಗ್ರಾಮೀಣ ಪರಿಸರದ ವೈವಿಧ್ಯ ಜೀವನಶೈಲಿ ಬಿಂಬಿಸುವ ಮಕ್ಕಳ ಗ್ರಾಮೀಣ ಕ್ರೀಡೆ, ಜಾನಪದ ಕಲೆ ಎಲ್ಲವನ್ನೂ ಕಲಾವಿದರು ಕಲಾಕೃತಿಗಳ ಮೂಲಕ ಕಟ್ಟಿಕೊಡಲಾಗಿದೆ. ದುಗ್ಗಮ್ಮನ ಜಾತ್ರೆ ವೇಳೆ ದೇವಿ ಪೂಜೆಗೆ ಹೊರಡುವ ಮೆರವಣಿಗೆ, ಕುಂಭ ಹೊತ್ತ ಮಹಿಳೆಯರು, ದೀಡ್ ನಮಸ್ಕಾರ ಹಾಕ್ತಿರುವ ಭಕ್ತರ ಕಲಾಕೃತಿಗಳು ಆಕರ್ಷಿಸುತ್ತಿವೆ. ಟಗರುಗಳು ಹುಡ್ಡಿ ಆಡ್ತಿರುವುದು, ಕುರಿ ಕಾಳಗ ಜನ ವೀಕ್ಷಣೆ ಮಾಡುತ್ತಿರುವ ಶೈಲಿ, ಕಾಳಗ ವೇಳೆ ಯಜಮಾನ್ರು, ಯುವಕರು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿರುವುದು, ಕುಸ್ತಿ ಅಖಾಡದಲ್ಲಿ ಸೆಣಸಾಟ ನಡೆಸುತ್ತಿರುವ ಪೈಲ್ವಾನ್ಗಳು, ಅಪ್ಪಿಕೋ ಚಳವಳಿ, ಕಬಡ್ಡಿ ಆಟ ಆಡುತ್ತಿರುವುದು, ಹಗ್ಗ ಜಿಗಿದಾಟ, ಕುಂಟೆಬಿಲ್ಲೆ, ಚಿನ್ನಿದಾಂಡು, ಯೋಗಾಸನ, ದೊಡ್ಡಾಟ, ಹುಲಿ ಕುಣಿತ, ತಮಟೆ ವಾದ್ಯ, ಗೊಂದಲಿಗರು, ಸೂತ್ರದ ಗೊಂಬೆ ಆಟ, ಜೋಗತಿ ಎಲ್ಲಮ್ಮ, ಜಾನಪದ ಹಾಡುವವರು, ಲಂಬಾಣಿ ನೃತ್ಯ ಮಾಡುತ್ತಿರುವ ಕಲಾಕೃತಿಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿರುವ ಒಂದೊಂದು ಕಲಾಕೃತಿಗಳು ಒಂದೊಂದು ಸಂದೇಶ ಸಾರುತ್ತಿವೆ.