ದಾವಣಗೆರೆ:ಮಹಾನಗರ ಪಾಲಿಕೆ ಆವರಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರಿಗೆ ಗುಂಡು ತಗುಲಿ, ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ನಡೆಯಿತು. ಇವಿಎಂ ಕಾವಲಿಗಿದ್ದ ಕಾನ್ಸ್‌ಟೇಬಲ್ ಗುರುಮೂರ್ತಿ ಗಂಭೀರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಗುರುಮೂರ್ತಿ ಅವರ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿ ಅವಘಡ ಸಂಭವಿಸಿದೆ.
ದಾವಣಗೆರೆಯ ಡಿಎಆರ್ 2011ರ ಬ್ಯಾಚ್ನ ಗುರುಮೂರ್ತಿ ಅವರನ್ನು ಮಹಾನಗರ ಪಾಲಿಕೆಯಲ್ಲಿ ಗಾರ್ಡ್ ಡ್ಯೂಟಿಗಾಗಿ ನಿಯೋಜಿಸಲಾಗಿತ್ತು. ಇಂದು ಇದ್ದಕ್ಕಿದಂತೆ ಅವರ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ನೋಡಿದ ಸ್ಥಳೀಯರು ಹಾಗು ಪೊಲೀಸ್ ಸಿಬ್ಬಂದಿ ಕೂಡಲೇ ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಗುರುಮೂರ್ತಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರಾ ಅಥವಾ ಆಕಸ್ಮಿಕವಾಗಿ ಬಂದೂಕಿನಿಮದ ಗುಂಡು ಹಾರಿದೆಯಾ ಎಂಬುದು ವಿಚಾರಣೆಯ ಬಳಿಕವಷ್ಟೇ ಗೊತ್ತಾಗಲಿದೆ. ಸದ್ಯ ಗುರುಮೂರ್ತಿ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಉಮಾಪ್ರಶಾಂತ್ ಹಾಗೂ ಐಜಿಪಿ ತ್ಯಾಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಕಲಬುರಗಿ: ತಾಯಿ-ಮಗಳು ಆತ್ಮಹತ್ಯೆ
ಎಸ್ಪಿ ಉಮಾಪ್ರಶಾಂತ್ ಹೇಳಿದಿಷ್ಟು: ಪ್ರಕರಣ ಸಂಬಂಧ ಮಾಧ್ಯಮದವರೊಂದಿಗೆ ಆಸ್ಪತ್ರೆ ಬಳಿ ಮಾತನಾಡಿದ ಎಸ್ಪಿ ಉಮಾಪ್ರಶಾಂತ್ ಅವರು ಪಾಲಿಕೆಯಲ್ಲಿ ಇವಿಎಂ ಕಾವಲು ಕಾಯಲು ನಮ್ಮ ಸಿಬ್ಬಂದಿ ಗುರುಮೂರ್ತಿ ಅವರನ್ನು ನೇಮಕ ಮಾಡಿಲಾಗಿತ್ತು. ರಾತ್ರಿ 08:30 ಸುಮಾರಿಗೆ ಅವರಿಗೆ ಗುಂಡೇಟಿನಿಂದ ಗಾಯ ಆಗಿದೆ ಎಂದು ಗೊತ್ತಾಗಿದೆ. ನಮ್ಮ ಸಿಬ್ಬಂದಿಯವರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ. ಗುರುಮೂರ್ತಿಯಿಂದ ಹೇಳಿಕೆ ಪಡೆದ ನಂತರ ಏನಾಗಿದೆ ಎಂಬುದು ಗೊತ್ತಾಗಲಿದೆ. ವೈದ್ಯರು ಅವರಿಗೆ ಆಪರೇಷನ್ ಮಾಡ್ತಿದ್ದಾರೆ, ಚಿಕಿತ್ಸೆ ಬಗ್ಗೆ ನಿಗಾ ವಹಿಸಿದ್ದಾರೆ. ಆಕಸ್ಮಿಕವಾಗಿ ಗುಂಡು ಹಾರಿದೆ ಅಂತ ಹೇಳಲಾಗುತ್ತಿದೆ. ಆದರೆ ಅವರಿಗೆ ಪ್ರಜ್ಞೆ ಬಂದು ಮಾತನಾಡಿದಾಗ ನಮಗೆ ಮಾಹಿತಿ ಸಿಗುತ್ತೆ, ನಾವು ಸದ್ಯ ಯಾವುದೇ ವಿಚಾರಣೆ ಮಾಡಲು ಹೋಗಿಲ್ಲ, ನಮ್ಮ ತನಿಖಾ ಅಧಿಕಾರಿ ಬಂದಿದ್ದಾರೆ ವಿಚಾರಣೆ ಮಾಡಲಿದ್ದಾರೆ. ಸ್ಥಿತಿ ಗಂಭೀರವಾಗಿದೆ, ಆದ್ರೂ ವೈದ್ಯರು ಪ್ರಯತ್ನ ಮಾಡ್ತಿದ್ದಾರೆ. ಭುಜಕ್ಕೆ ತೀವ್ರ ಏಟಾಗಿದ್ದು, ಇದೀಗ ಅವರು ಚಿಕಿತ್ಸೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರಿಂದ ಮಾಹಿತಿ ಕಲೆಹಾಕಿ ಮುಂದೆ ಎಫ್ಐಆರ್ ದಾಖಲಿಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ನಮ್ಮಲ್ಲಿ ಕೌನ್ಸಲರ್ ಇದ್ದಾರೆ. ಪ್ರತ್ಯೇಕವಾಗಿ ಪ್ರತಿಯೊಂದು ಠಾಣೆಗೆ ಹೋಗಿ ಸಿಬ್ಬಂದಿ ಜೊತೆ ಮಾತನಾಡಿ, ಕೆಲಸದ ಒತ್ತಡವಿದ್ದರೆ ಪರಿಹರಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಬಿದ್ರೆ ಮುಂದೆ ಯೋಚನೆ ಮಾಡಲಿದ್ದೇವೆ ಎಂದು ಎಸ್ಪಿ ತಿಳಿಸಿದರು.