ಕರ್ನಾಟಕ

karnataka

ETV Bharat / state

ದಾವಣಗೆರೆಯ ಈ ಗ್ರಾಮದಲ್ಲಿ 200 ವರ್ಷಗಳಿಂದ ದೀಪಾವಳಿ ಆಚರಿಸುತ್ತಿಲ್ಲ: ಬೆಳಕಿನ ಹಬ್ಬ ಇವರಿಗೆ ಕರಾಳ ದಿನ!

ದೀಪಾವಳಿಯನ್ನು ದೇಶ - ವಿದೇಶಗಳಲ್ಲಿ ಭಾರತೀಯರು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಾವಣಗೆರೆಯ ಲೋಕಿಕೆರೆ ಗ್ರಾಮದಲ್ಲಿ ಕರಾಳ ದೀಪಾವಳಿ ಆಚರಿಸಲಾಗುತ್ತೆ. ಈ ಕುರಿತ ಈಟಿವಿ ಭಾರತ ಕನ್ನಡ ವರದಿಗಾರ ನೂರ್​ ಮಾಡಿರುವ ವಿಶೇಷ ವರದಿ ಇಲ್ಲಿದೆ.

ಲೋಕಿಕೆರೆ ಗ್ರಾಮ
ಲೋಕಿಕೆರೆ ಗ್ರಾಮ (ETV Bharat)

By ETV Bharat Karnataka Team

Published : Nov 2, 2024, 5:04 PM IST

ದಾವಣಗೆರೆ:ಬೆಳಕಿನ ಹಬ್ಬ ದೀಪಾವಳಿಯನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೊಸ ಉಡುಗೆ ತೊಟ್ಟು, ಪಟಾಕಿ ಸಿಡಿಸಿ ಮನೆಮಂದಿಯೆಲ್ಲ ಒಟ್ಟಾಗಿ ಸಂಭ್ರಮಿಸುವುದು ಪದ್ಧತಿ. ಆದರೆ, ಜಿಲ್ಲೆಯ ಲೋಕಿಕೆರೆ ಗ್ರಾಮಸ್ಥರು ಮಾತ್ರ ದೀಪಾವಳಿ ಹಬ್ಬವನ್ನು ಆಚರಿಸುವುದಿಲ್ಲ.

ಕಳೆದ ಎರಡ್ಮೂರು ಶತಮಾನಗಳಿಂದ ಈ ಊರ ಜನರು ದೀಪಾವಳಿ ಹಬ್ಬ ಆಚರಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಹಬ್ಬ ಆಚರಿಸಿದರೇ ಕೆಡಕು ಸಂಭವಿಸುತ್ತದೆ ಎಂದು ಇಲ್ಲಿನ ಗ್ರಾಮಸ್ಥರ ಮಾತಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರು ಸೇರಿದಂತೆ ಕುರುಬರೇ ಹೆಚ್ಚಿರುವ ಈ ಗ್ರಾಮದಲ್ಲಿ ದೀಪಾವಳಿ ಹಬ್ಬದಾಚರಣೆ ಮಾಡುವ ಬದಲು ಕರಾಳ ದಿನವನ್ನಾಗಿ ಆಚರಿಸಲಾಗುತ್ತದೆ. ಸುಮಾರು 200ಕ್ಕೂ ಹೆಚ್ಚು ವರ್ಷಗಳಿಂದ ಈ ಪದ್ಧತಿಯನ್ನು ಗ್ರಾಮದ ಹಿರಿಯರು ನಡೆಸಿಕೊಂಡು ಬರುತ್ತಿದ್ದಾರೆ. ಕೆಲವರು ಗ್ರಾಮದ ಆಂಜನೇಯನ ತೇರಿನ ಸಮಯ ಹಾಗೂ ಇನ್ನೂ ಕೆಲವರು ವಿಜಯದಶಮಿ ಸಂದರ್ಭದಲ್ಲಿ, ಮತ್ತಷ್ಟು ಜನರು ಮಹಾಲಯ ಅಮಾವಾಸ್ಯೆ ದಿನ ಹಿರಿಯರ ಹಬ್ಬ ನೆರವೇರಿಸುತ್ತಾರೆ.

ಆ ಸಮಯದಲ್ಲಿ ದೀಪಾವಳಿ ರೀತಿಯೇ ಹಬ್ಬ ಆಚರಿಸುತ್ತಾರೆ. ಇದನ್ನು ಹೊರತುಪಡಿಸಿ ದೀಪಾವಳಿ ದಿನದಂದು ಹಬ್ಬ ಆಚರಿಸಿದರೆ, ಕೆಡುಕಾಗುವುದೇ ಹೆಚ್ಚು ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ. ದೀಪಾವಳಿ ಹಬ್ಬದ ವೇಳೆ ಆಚರಣೆಗಳನ್ನು ಕೈಬಿಟ್ಟು, ಬೇರೆ ಊರುಗಳಲ್ಲಿ ನೆಲೆಸಿರುವ ಸಂಬಂಧಿಕರ ಮನೆಗಳಿಗೆ ತೆರಳಿ ಊಟ, ಉಪಚಾರ ಮಾಡಿಕೊಂಡು ಬರುತ್ತಾರೆ. ಆದ್ರೆ, ಲೋಕಿಕೆರೆ ಗ್ರಾಮದಲ್ಲಿ ಮಾತ್ರ ದೀಪಾವಳಿ ಆಚರಿಸುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ದೀಪಾವಳಿ ಆಚರಿಸದಿರಲು ಕಾರಣ:ಶತಮಾನಗಳ ಹಿಂದೆ, ಹಬ್ಬ ಆಚರಿಸಲು ಲೋಕಿಕೆರೆ ಗ್ರಾಮದ ಕೆಲ ಹಿರಿಯರು, 'ಕಾಶಿ ಹುಲ್ಲು' ತರಲು ಕಾಡಿಗೆ ತೆರಳಿದ್ದರು. ಹುಲ್ಲು ತರಲು ಹೋದ ಯಾರೊಬ್ಬರೂ ಕೂಡ ಮರಳಿ ಬರಲಿಲ್ಲ. ಗ್ರಾಮಸ್ಥರೆಲ್ಲ ಎಲ್ಲೆಡೆ ಹುಡುಕಿದರೂ ಅವರಲ್ಲಿ ಒಬ್ಬರೂ ಪತ್ತೆಯಾಗಿಲ್ಲವಂತೆ. ನಂತರ ದಿನಗಳಲ್ಲಿ ಗ್ರಾಮದಲ್ಲಿ ದೀಪಾವಳಿ ಆಚರಣೆ ಮಾಡುವುದನ್ನೇ ಕೈಬಿಡಲಾಯಿತು. ಈ ನಿರ್ಧಾರ ಮಾಡಿದ್ದು ಗ್ರಾಮದ ಹಿರಿಯರು. ಒಂದು ವೇಳೆ ಗ್ರಾಮದಲ್ಲಿ ಅದನ್ನು ಮೀರಿಯೂ ಹಬ್ಬ ಆಚರಿಸಿದರೆ ಕೆಡುಕಾಗುತ್ತದೆ ಎನ್ನುವುದು ಗ್ರಾಮಸ್ಥರು ನಂಬಿಕೆ. ಇನ್ನೂ ಕೆಲವರು ಗ್ರಾಮದಲ್ಲಿ ಹಬ್ಬ ಆಚರಣೆ ಮಾಡಲು ಮುಂದಾದ ವೇಳೆ ಕೆಡುಕಾಗಿರುವ ಉದಾಹರಣೆಗಳೂ ಇವೆಯಂತೆ.

ದೀಪಾವಳಿ ಆಚರಿಸದ ಲೋಕಿಕೆರೆ ಗ್ರಾಮಸ್ಥರು (ETV Bharat)

ಯುವಕರಲ್ಲಿ ಉತ್ಸಾಹ, ಹಿರಿಯರಿಂದ ಹಿಂದೇಟು; ಬೆಳಕಿನ ಹಬ್ಬವನ್ನು ಆಚರಣೆ ಮಾಡಬೇಕೆಂದು ಗ್ರಾಮದ ಯುವಕರು ಹಿರಿಯ ಮುಖಂಡರ ಸಭೆ ಕರೆದು ಚರ್ಚೆ ನಡೆಸಿದರೂ ಹಬ್ಬ ಆಚರಣೆಗೆ ಹಿರಿಯರು ಒಪ್ಪಿಗೆ ನೀಡಿಲ್ಲವಂತೆ. ಒಟ್ಟಾರೆ ಹಿಂದುಗಳ ಬಹುದೊಡ್ಡ ಹಬ್ಬ ದೀಪಾವಳಿ ಆಚರಣೆ ಮಾಡುವುದೇ ಒಂದು ದೊಡ್ಡ ಸಂತಸ. ಆದರೆ ದಶಕಗಳಿಂದ ಲೋಕಿಕೆರೆ ಗ್ರಾಮದ ಗ್ರಾಮಸ್ಥರು ದೀಪಾವಳಿ ಹಬ್ಬವನ್ನು ಆಚರಿಸದಿರುವುದು ಅಚ್ಚರಿಯ ಸಂಗತಿಯಾಗಿದೆ.

ಗ್ರಾಮಸ್ಥರಾದ ಪುರಂದರ ಅವರು ಈಟಿವಿ ಭಾರತ ಕನ್ನಡ ಮಾತನಾಡಿ, " ಲೋಕಿಕೆರೆ ಗ್ರಾಮದಲ್ಲಿ ಬಹುತೇಕರು ದೀಪಾವಳಿ ಹಬ್ಬ ಆಚರಣೆ ಮಾಡುವುದಿಲ್ಲ. ಹಬ್ಬ ಮಾಡುತ್ತೇವೆ ಎಂದರೆ ನಮ್ಮ ಹಿರಿಯರು ಹಬ್ಬ ಮಾಡಿದರೆ ಕೆಡುಕಾಗುತ್ತದೆ ಎಂದು ಗದರುತ್ತಾರೆ. ಹಿಂದಿನಿಂದಲೂ ನಮ್ಮ ಹಿರಿಯರು ಹಬ್ಬ ಆಚರಣೆ ಮಾಡಿಲ್ಲ, ಹೀಗಾಗಿ ನಾವೂ ಸಹ ಹಬ್ಬ ಆಚರಿಸುತ್ತಿಲ್ಲ. ಬ್ರಹ್ಮದಂಡೆ, ಎಕ್ಕದ ಹೂವು, ಕಾಶಿ ಹುಲ್ಲು ದೀಪಾವಳಿ ಹಬ್ಬಕ್ಕೆ ಬಹಳ ಮುಖ್ಯ. ಇದನ್ನು ತರಲು ಕಾಡಿಗೆ ಹೋದ ಹಿರಿಯರು ಮರಳಿ ಬಾರದ ಹಿನ್ನೆಲೆಯಲ್ಲಿ ಹಬ್ಬ ಆಚರಣೆ ಕೈಬಿಡಲಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ಚಿಕ್ಕಮಗಳೂರು: ಗಾಳಿ ರೂಪದಲ್ಲಿ ಗರ್ಭಗುಡಿ ಸೇರಿದ ದೇವಿರಮ್ಮ!

ABOUT THE AUTHOR

...view details