ದಾವಣಗೆರೆ:ಅದು ಅತ್ಯಂತ ಪುರಾತನವಾದ ಐತಿಹಾಸಿಕ ದೇವಾಲಯ. ಚಾಲುಕ್ಯರು, ಕದಂಬರು, ಹೊಯ್ಸಳರು ಸೇರಿದಂತೆ ಈ ಮೂರು ಸಾಮ್ರಾಜ್ಯದ ರಾಜರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ. ತುಂಗಭದ್ರಾ ನದಿ ತಟದಲ್ಲಿರುವ ಭವ್ಯ ದೇವಾಲಯ ನಿರ್ಮಿಸಲು ಇಪ್ಪತ್ತು ವರ್ಷಗಳೇ ಬೇಕಾಯಿತು. ಹೊಯ್ಸಳನ ಎರಡನೇ ನರಸಿಂಹನ ಸೇನಾದಂಡ ನಾಯಕ ಪೊಳಾಲ್ವನು ಕೊನೆಯದಾಗಿ ಈ ದೇವಾಲಯ ಪೂರ್ಣಗೊಳಿಸಿದನು ಎಂಬ ಇತಿಹಾಸವಿದೆ. ಇದೀಗ ಈ ದೇವಸ್ಥಾನ ನಿರ್ಮಿಸಿ 800 ವರ್ಷಗಳಾಗುತ್ತಿವೆ.
1021ರಲ್ಲಿ ಚಾಲುಕ್ಯರು, ಕದಂಬರು, ಹೊಯ್ಸಳರು ಸಾಮ್ರಾಜ್ಯದ ರಾಜರು ಹಂತಹಂತವಾಗಿ ತಮ್ಮ ಆಡಳಿತವಾಧಿಯಲ್ಲಿ ಈ ದೇವಾಲಯ ನಿರ್ಮಾಣ ಮಾಡಿದ್ದರು ಎಂದು ಹಿರಿಯರು ಹೇಳುತ್ತಿದ್ದಾರೆ. ಹೊಯ್ಸಳರ ಕಾಲದಲ್ಲಿ 2ನೇ ವೀರ ಬಲ್ಲಾಳ ಮುಂದೆ ನಿಂತು ಈ ದೇವಾಲಯ ಕಟ್ಟಲು ಆರಂಭಿಸುತ್ತಾನೆ. ಅದನ್ನು ಹೊಯ್ಸಳರ ಎರಡನೇ ನರಸಿಂಹನ ಸೇನಾದಂಡನಾಯಕ ಪೊಳಾಲ್ವ ಎಂಬವನು ಕ್ರಿ.ಶ 1224ರಲ್ಲಿ ಪೂರ್ಣಗೊಳಿಸಿದ್ದಾನೆ ಎಂದು ಶಾಸನದಲ್ಲಿ ಉಲ್ಲೇಖವಿದೆ.
''ಈ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಾಣ ಆಗಿದ್ದರಿಂದ ನಕ್ಷತ್ರ ಅಥವಾ ಚೌಕಾರದಲ್ಲಿ ಕಟ್ಟಲಾಗಿದೆ. ಭವ್ಯ ದೇವಾಲಯದಲ್ಲಿ ಒಟ್ಟು 66 ಕಂಬಗಳಿವೆ. ದೇವಸ್ಥಾನದಲ್ಲಿ ನಿಂತು ನೋಡಿದರೆ ಎಲ್ಲಾ ಕಂಬಗಳು ಏಕಕಾಲಕ್ಕೆ ಕಾಣುವುದು ವಿಶೇಷವಾಗಿದೆ. ಹರಿಹರೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಗರ್ಭಗುಡಿ ಮಾತ್ರ ನಿರ್ಮಿಸಿ ಒಟ್ಟು 1,200 ವರ್ಷ ಕಳೆದಿವೆ.
ಆದರೆ ವಾಸ್ತುಶಿಲ್ಪ, ಪ್ರಾಂಗಣ, ಕಂಬಗಳು ಗೋಪುರ ಸೇರಿದಂತೆ ಇಡೀ ದೇವಾಲಯ ನಿರ್ಮಾಣವಾಗಿ ಒಟ್ಟು 800 ವರ್ಷಗಳಾಗಿವೆ. ಒಂದೊಂದು ಸಾಮ್ರಾಜ್ಯದ ರಾಜರು ಅಧಿಕಾರದಲ್ಲಿದ್ದಾಗ ಒಬ್ಬೊಬ್ಬ ರಾಜ ದೇವಾಲಯದ ಒಂದೊಂದು ಭಾಗ ಕಟ್ಟಿದ್ದರಿಂದ ಕಾಮಗಾರಿ ಪೂರ್ಣವಾಗಲು ಒಟ್ಟು ಇಪ್ಪತ್ತು ವರ್ಷಗಳಾಗಿವೆ'' ಎಂದು ಇಲ್ಲಿನ ಹಿರಿಯರಾದ ಶ್ರೀನಿವಾಸ್ ಮೂರ್ತಿ ಮಾಹಿತಿ ನೀಡಿದರು.
ಇಲ್ಲಿ ನೆಲೆಸಿ ಭಕ್ತರನ್ನು ಕಾಯುತ್ತಿರುವ ಹರಿಹರೇಶ್ವರ ಮೂರ್ತಿಯ ಎತ್ತರ ಒಟ್ಟು 6.5 ಅಡಿಯಷ್ಟಿದೆ. ಐತಿಹಾಸಿಕ ಕ್ಷೇತ್ರಕ್ಕೆ ಗುಹಾರಣ್ಯ ಕ್ಷೇತ್ರ ಎಂದೂ ಕರೆಯುತ್ತಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ. ಮೊದಲಿಗೆ ಹರಿಹರ ನಗರಕ್ಕೆ ದಂಡಕಾರಣ್ಯ ಎಂಬ ಹೆಸರಿತ್ತಂತೆ. ಇಲ್ಲಿ ನೆಲೆಸಿದ್ದ ರಾಕ್ಷಸನೊಬ್ಬನಿಂದ ಈ ದಂಡಕರಾಣ್ಯ ಎಂಬ ಹೆಸರು ಬಂದಿದೆ. ಆ ರಾಕ್ಷಸನ ಮೇಲೆ ಹರಿಹರೇಶ್ವರ ಪಾದ ಇಟ್ಟಾಗ ಪಾತಾಳಕ್ಕೆ ಹೋಗುತ್ತಾನೆ. ಆದ್ದರಿಂದ ದೇವರ ಪಾದ ಕೂಡ ಪಾತಾಳಕ್ಕೆ ಹೋಗಿದ್ದರಿಂದ ಮೊಣಕಾಲಿನ ಮೇಲೆ ದೇವರ ಮೂರ್ತಿ ಇದೆ. ಹರಿಹರೇಶ್ವರ ರಾಕ್ಷಸನನ್ನು ಸಂಹಾರ ಮಾಡಿದಕ್ಕಾಗಿ ಇದಕ್ಕೆ ಗುಹಾರಣ್ಯ ಎಂಬ ಹೆಸರು ಬಂತು ಎಂದು ಶ್ರೀನಿವಾಸ್ ಮೂರ್ತಿ ತಿಳಿಸಿದರು.