ಮೈಸೂರು ವಿಭಾಗ ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ರೋಹಿತ್ ಎಸ್.ಜೈನ್ ಮಾಹಿತಿ ದಾವಣಗೆರೆ: ಅದು ಮೂರು ಜಿಲ್ಲೆಗಳ ಕನಸಿನ ಯೋಜನೆ. ಈ ಯೋಜನೆ ಜಾರಿಗೆ ಬಂದರೆ ಕೆಲವೇ ಗಂಟೆಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರನ್ನು ತಲುಪಬಹುದು. ನೇರ ರೈಲು ಮಾರ್ಗದ ಯೋಜನೆಗೆ 2011-12ರಲ್ಲಿಯೇ ಕೇಂದ್ರ ಸರ್ಕಾರದಿಂದ ಮಂಜೂರಾತಿ ಸಿಕ್ಕಿತ್ತು. 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 1,840 ಕೋಟಿ ರೂ. ವೆಚ್ಚದ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿ ರಾಜ್ಯದಿಂದ ಯೋಜನೆಯ ಶೇ.50ರಷ್ಟು ವೆಚ್ಚ ಭರಿಸಲು ಒಪ್ಪಿಗೆ ಸೂಚಿಸಿದ್ದರು. 2019ರೊಳಗೆ ಆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು.
ಇದೀಗ ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ. ಒಟ್ಟು 196 ಕಿ.ಮೀ ಅಂತರವಿದ್ದು, ದಾವಣಗೆರೆ ವ್ಯಾಪ್ತಿಯ ಕಾಮಗಾರಿ ಶೇ.40ರಷ್ಟು ನಡೆದಿದೆ. ಪ್ರಸ್ತುತ ದಾವಣಗೆರೆಯಿಂದ ಬೆಂಗಳೂರಿಗೆ ರೈಲು ಪ್ರಯಾಣ ಒಟ್ಟು 327 ಕಿ.ಮೀ ಆಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ ಒಟ್ಟು 60 ಕಿ.ಮೀ ನಷ್ಟು ಪ್ರಯಾಣ ಕಡಿಮೆಯಾಗಲಿದೆ. ಇದರಿಂದ ಕೈಗಾರಿಕೆಗಳು ಬೆಳೆಯುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿಯತನಕ ರೈಲ್ವೇ ಟ್ರ್ಯಾಕ್ ಅನ್ನೇ ನೋಡದ ಹಿರಿಯೂರು ಹಾಗು ಶಿರಾ ತಾಲೂಕುಗಳಿಗೂ ಈ ಯೋಜನೆ ಉಪಯೋಗವಾಗಲಿದೆ.
ಚೆನ್ನೈ, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಬೆಳಗಾವಿಯತನಕ ಇಂಡಸ್ಟ್ರಿಯಲ್ ಕಾರಿಡರ್ ಘೋಷಣೆಯಾಗಿದೆ. ಇದಕ್ಕೂ ಯೋಜನೆ ಸಹಾಯವಾಗಲಿದೆ. ಕಾಮಗಾರಿಗಾಗಿ 230 ಎಕರೆ ಪ್ರದೇಶದಲ್ಲಿ 210 ಎಕರೆ ಭೂಸ್ವಾಧೀನ ಮಾಡಲಾಗಿದೆ. ದಾವಣಗೆರೆಯಿಂದ ಭರಮಸಾಗರ ತನಕ ಕಾಮಗಾರಿ ಮಾಡಲು ಟೆಂಡರ್ ಆಗಿತ್ತು. ಈ ವರ್ಷದ ಡಿಸೆಂಬರ್ನಲ್ಲಿ ದಾವಣಗೆರೆ ಭಾಗದ ಕಾಮಗಾರಿ ಮಾತ್ರ ಮುಗಿಯುವ ಲಕ್ಷಣಗಳು ಗೋಚರಿಸಿವೆ. ದಾವಣಗೆರೆ ವ್ಯಾಪ್ತಿಯಲ್ಲಿ ಜಮೀನು ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿದೆ.
ಆದರೆ, ಚಿತ್ರದುರ್ಗ ಹಾಗು ತುಮಕೂರಿನಲ್ಲಿ ಕಾಮಗಾರಿಗೆ ಸ್ವಲ್ಪಮಟ್ಟಿನ ಸಮಸ್ಯೆ ಎದುರಾಗಿದೆ. ತುಮಕೂರು ಜಿಲ್ಲೆಯ ಹುಡ್ಕೇರೆ ತಿಮ್ಮರಾಜಹಳ್ಳಿವರೆಗೆ ಭರಪೂರ ಕೆಲಸ ಆಗುತ್ತಿದೆ. ಅಲ್ಲಿಂದ ಒಂದು ಡೈವರ್ಷನ್ ರಾಯದುರ್ಗ ಮತ್ತೊಂದು ಡೈವರ್ಷನ್ ದಾವಣಗೆರೆ ಕಡೆ ಮಾಡಲಾಗಿದೆ. ಶಿರಾದಿಂದ ಹಿರಿಯೂರು ಚಿತ್ರದುರ್ಗದತನಕ ಸ್ವಲ್ಪಮಟ್ಟಿಗೆ ಜಮೀನು ಭೂ ಸ್ವಾಧೀನ ಪ್ರಕ್ರಿಯೆ ಕುಂಠಿತವಾಗಿದೆ. 2,250 ಎಕರೆ ಭೂಮಿಯಲ್ಲಿ ದಾವಣಗೆರೆಯಲ್ಲಿ 210 ಎಕರೆ ಜಮೀನು ಭೂಸ್ವಾಧೀನ ಮಾಡಲಾಗಿದೆ. ಉಳಿದಂತೆ ಚಿತ್ರದುರ್ಗ, ತುಮಕೂರಿನಲ್ಲಿ ಜಮೀನು ವಶಪಡಿಸಿಕೊಳ್ಳುವುದು ನಿಧಾನವಾಗಿ ಸಾಗುತ್ತಿದೆ. ಈ ಭೂಮಿ ಸಿಕ್ಕರೆ 2026-27ಕ್ಕೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಮೈಸೂರು ವಿಭಾಗ ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ರೋಹಿತ್ ಎಸ್.ಜೈನ್ ಮಾಹಿತಿ ನೀಡಿದರು.
ನೇರ ರೈಲು ಮಾರ್ಗ ಪೂರ್ಣಗೊಂಡರೆ ಜನಸಾಮಾನ್ಯರಿಗೆ ಹಣ, ಸಮಯ, ಪ್ರಯಾಣದ ಅವಧಿ ಕಡಿಮೆಯಾಗಲಿದೆ. ದಾವಣಗೆರೆಯಿಂದ ವಂದೇ ಭಾರತ್ ರೈಲು 327 ಕಿ.ಮೀ ಕ್ರಮಿಸಿ 3.25 ನಿಮಿಷಕ್ಕೆ ಬೆಂಗಳೂರು ತಲುಪುತ್ತದೆ. ನೇರ ರೈಲು ಮಾರ್ಗದಿಂದ 2 ಗಂಟೆ 45 ನಿಮಿಷದಲ್ಲೇ ಬೆಂಗಳೂರು ಸೇರಬಹುದು. ರಾಜ್ಯ ಸರ್ಕಾರ ಜಮೀನು ನೀಡಿದರೆ, ಕೇಂದ್ರ ಸರ್ಕಾರ ಬೇಕಾಗುವ ವೆಚ್ಚ, ಸಲಕರಣೆಗಳು, ಉಪಕರಣಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಜಮೀನು ನೀಡಿದರಷ್ಟೇ ವೇಗದಲ್ಲಿ ನಾವು ಕಾಮಗಾರಿ ಮುಗಿಸುತ್ತೇವೆ ಎಂದು ನೈರುತ್ಯ ರೈಲು ಮಾರ್ಗ ಮೈಸೂರು ವಲಯದ ಅಧಿಕಾರಿಗಳು ಹೇಳ್ತಿದ್ದಾರೆ ಎಂದು ರೋಹಿತ್ ಎಸ್.ಜೈನ್ ತಿಳಿಸಿದರು.
ಇದನ್ನೂ ಓದಿ:ಡಾ.ಸಿ.ಎನ್.ಮಂಜುನಾಥ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿ: ಆರ್.ಅಶೋಕ್