ದಾವಣಗೆರೆ: ಹರಿಹರ ತಾಲೂಕಿನಲ್ಲಿ ವೀಳ್ಯದೆಲೆ ಬೆಳೆಯುವ ರೈತರು ಹೆಚ್ಚಿದ್ದು, ಸರಿಯಾಗಿ ಬೆಲೆ ಸಿಗದೆ ಸಂಕಷ್ಟದಲ್ಲಿದ್ದಾರೆ. ಹನಗವಾಡಿ, ಶಂಸೀಪುರ, ಭಾನುವಾಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಅಧಿಕವಾಗಿ ಎಲೆ ಬಳ್ಳಿ ತೋಟಗಳಿವೆ. ಇಲ್ಲಿಯ ಎಲೆ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಗೆ ಪೂರೈಕೆಯಾಗುತ್ತದೆ. ಆದರೆ ಬೆಳೆಗೆ ವ್ಯಯಿಸಿದ ಹಣ ಮಾತ್ರ ಕೈ ಸೇರುತ್ತಿಲ್ಲ ಎನ್ನುವುದು ರೈತರ ನೋವು.
ಒಂದೆಡೆ ಇಳುವರಿ ಕಡಿಮೆ, ಇನ್ನೊಂದೆಡೆ ಅಧಿಕ ಕೂಲಿ ಹೊರೆ. ಇದರ ಜೊತೆಗೆ ದಲ್ಲಾಲಿಗಳ ಕಮಿಷನ್ ಬರೆ ಎಲ್ಲಾ ಸೇರಿ ರೈತರನ್ನು ಕಂಗಾಲಾಗಿಸುತ್ತಿದೆ. ಬೆಳೆ ಬೆಳೆಯಲು ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದರಿಂದ ವೀಳ್ಯದೆಲೆ ಬೆಳೆಗಾರರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ವಿದ್ಯುತ್ಗಾಗಿ ರಾತ್ರಿ-ಹಗಲು ಕಾಯುವ ಪರಿಸ್ಥಿತಿ ಇದೆ.
"ಜೂನ್-ಜುಲೈ ತಿಂಗಳಿನಲ್ಲಿ ಮಳೆಗಾಲ ಇರುವುದರಿಂದ ಇಳುವರಿ ಹೆಚ್ಚಾಗುತ್ತದೆ. ಆದರೆ ಮಳೆ ನೀರಿನಿಂದ ಎಲೆಗಳಿಗೆ ರೋಗ ತಗುಲಿ ತೊಂದರೆಯಾಗುತ್ತದೆ. ಒಳ್ಳೆ ಬೆಳೆ ಇದ್ದಾಗ ಬೆಲೆ ಸಿಗಲ್ಲ, ಒಳ್ಳೆ ಬೆಲೆ ಸಿಕ್ಕಾಗ ಬಳ್ಳಿ ರೋಗಕ್ಕೆ ತುತ್ತಾಗುತ್ತದೆ. ಹೀಗಾಗಿ ಸರಿಯಾಗಿ ಹಣ ಸಿಗದೆ ರೈತರು ಸಾಲದ ಮೊರೆ ಹೋಗುತ್ತಿದ್ದಾರೆ. ಸಾಲ ನೀಡಲು ಬ್ಯಾಂಕ್ನವರು ನೂರಾರು ನಿಯಮ ಮಾಡುತ್ತಾರೆ. ಇದೀಗ ಎಲೆಗೆ ಬೇಡಿಕೆ ಇದ್ದು, ಇಳುವರಿ ಕಡಿಮೆ ಇದೆ. ಈ ಸಂದರ್ಭದಲ್ಲಿಯೇ ಎಲೆ ಮಾರಾಟ ಆಗುತ್ತದೆ. ಬಳಿಕ ಮಳೆಗಾಲದಲ್ಲಿ ಹೆಚ್ಚು ಎಲೆ ಫಸಲು ಬರುತ್ತದೆ. ಬೇಡಿಕೆ ಮಾತ್ರ ಇರುವುದಿಲ್ಲ. ಒಂದು ಟ್ರ್ಯಾಲಿ ಗೊಬ್ಬರಕ್ಕೆ 12 ಸಾವಿರ ರೂ. ಇದೆ. ಗೊಬ್ಬರದ ಹಣವನ್ನೂ ಎಲೆ ಮಾರಾಟದಿಂದ ಗಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರಿಗೆ ಗೊಬ್ಬರದ ಸಮಸ್ಯೆಯೂ ಎದುರಾಗಿದೆ" ಎಂದು ರೈತ ಶಂಭುಲಿಂಗಪ್ಪ ಹೇಳಿದರು.
ರೈತ ಕೊಟ್ರೇಶ್ ಎಂಬವರು ಮಾತನಾಡಿ, "ಎಲೆಬಳ್ಳಿ ಉಳಿಸಿಕೊಳ್ಳಲು ನೀರು ಬೇಕು. ಮಳೆ ಇಲ್ಲದೆ ನೀರಿನ ಸಮಸ್ಯೆ ತಲೆದೋರಿದೆ. ಬೋರ್‌ವೆಲ್ ಹಾಕಿಸಬೇಕಿದೆ. ಬೋರ್‌ವೆಲ್‌ಗೆ 1ರಿಂದ 2 ಲಕ್ಷ ರೂ. ಬೇಕು. ಈ ಹಣ ನಮ್ಮಲ್ಲಿ ಇಲ್ಲ, ಸಾಲ ಮಾಡಬೇಕು. ಮಾರುಕಟ್ಟೆಯಲ್ಲಿ ಒಂದು ಎಲೆ ಪೆಂಡಿಗೆ 1500 ರೂ. ಇದೆ. ಎಲೆ ಕಿತ್ತು ಮಾರುಕಟ್ಟೆಗೆ ಕೊಂಡೊಯ್ಯುವ ವೇಳೆಗೆ ಆ ಹಣ ನಮ್ಮ ಕೈ ಬಿಟ್ಟಿರುತ್ತದೆ" ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಚಿಕ್ಕಮಗಳೂರು: ಅಕಾಲಿಕ ಮಳೆಗೆ ಕಾಫಿ ಬೆಳೆ ನಾಶ, ಬೆಳೆಗಾರರು ಕಂಗಾಲು