ಕರ್ನಾಟಕ

karnataka

ETV Bharat / state

ಪಿಡಿಓ ಮೇಲೆ ಡಾಟಾ ಎಂಟ್ರಿ ಆಪರೇಟರ್ ಕುಟುಂಬಸ್ಥರಿಂದ ಹಲ್ಲೆ ಆರೋಪ: ದೂರು ದಾಖಲು - ASSAULT ON PDO

ಪಿಡಿಓ ಮೇಲೆ ಡಾಟಾ ಎಂಟ್ರಿ ಆಪರೇಟರ್ ಕುಟುಂಬಸ್ಥರು ಹಲ್ಲೆ ನಡೆಸಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ತಪ್ಪಿತಸ್ಥರು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸಿದೆ.

ASSAULT ON PDO
ಹಲ್ಲೆಯ ದೃಶ್ಯ (ETV Bharat)

By ETV Bharat Karnataka Team

Published : Dec 7, 2024, 4:07 PM IST

ನೆಲಮಂಗಲ: ಕರ್ತವ್ಯ ಲೋಪ ಹಿನ್ನೆಲೆ ಸೇವೆಯಿಂದ ಅಮಾನತಾದ ಮಹಿಳಾ ಡಾಟಾ ಎಂಟ್ರಿ ಆಪರೇಟರ್​​ನ ಕುಟುಂಬಸ್ಥರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದಿದೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಪಿಡಿಓ ಮೋಹನ್ ಕುಮಾರ್ ಗಾಯಗೊಂಡಿದ್ದು, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾಟಾ ಎಂಟ್ರಿಯಾಗಿದ್ದ ಮಹಾಲಕ್ಷ್ಮೀ ತನ್ನ ಕುಟುಂಬಸ್ಥರೊಂದಿಗೆ ಆಗಮಿಸಿ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪಿಡಿಓ ಮೋಹನ್ ಕುಮಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ (ETV Bharat)

ಮಹಾಲಕ್ಷ್ಮೀ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆ ಕಳೆದ 5 ತಿಂಗಳ ಹಿಂದೆ ಅಮಾನತುಗೊಳಿಸಲಾಗಿತ್ತು. ಅಮಾನತು ಪ್ರಕರಣದ ವಿಚಾರಣೆ ಬಗ್ಗೆ ಮಹಾಲಕ್ಷ್ಮೀ ವಿರುದ್ಧ ಸಾಕ್ಷಿ ಹೇಳಲು ನಾನು ಹೈಕೋರ್ಟ್​ಗೆ ಹೋಗುತ್ತಿದ್ದೇನೆಂದು ತಿಳಿದು ಈ ಹಲ್ಲೆ ನಡೆಸಿದ್ದಾರೆ. ಮಹಾಲಕ್ಷ್ಮೀ, ಮಾವ ತಿಮ್ಮಯ್ಯ, ತಾಯಿ ಮಹಿಮಕ್ಕ ಎಂಬುವರು ನಿನ್ನೆ ಪಂಚಾಯಿತಿಗೆ ಬಂದಿದ್ದು, ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮೋಹನ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪಿಡಿಓ ಮೇಲಿನ ಹಲ್ಲೆಯನ್ನ ನೆಲಮಂಗಲ ಸರ್ಕಾರಿ ನೌಕರರ ಸಂಘ ಖಂಡಿಸಿದ್ದು, ಆರೋಪಿಗಳನ್ನು ಬಂಧಿಸದಿದ್ದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಲ್ಲದೆ, ಸರ್ಕಾರಿ ನೌಕರರು ಕೆಲಸಕ್ಕೆ ರಜೆ ಹಾಕುವುದಾಗಿ ಅಧ್ಯಕ್ಷ ನಾಗೇಶ್.ಕೆ.ಎನ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಹೊಸಕೋಟೆ: ಪಿಯುಸಿ ವಿದ್ಯಾರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ABOUT THE AUTHOR

...view details