ಬಜೆಟ್ ಬಗ್ಗೆ ದಕ್ಷಿಣಕನ್ನಡ ಜನ ಪ್ರತಿಕ್ರಿಯೆ ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಕರಾವಳಿಗೆ ವಿಶೇಷ ಕೊಡುಗೆ ಸಿಕ್ಕಿಲ್ಲ. ಕಳೆದ ಬಾರಿಯ ಬಜೆಟ್ನಲ್ಲಿಯೂ ಜಿಲ್ಲೆಗೆ ಅತ್ಯಲ್ಪ ಕೊಡುಗೆ ನೀಡಲಾಗಿತ್ತು. ಈ ಬಾರಿಯೂ ಕೆಲವೇ ಕೆಲವು ಕೊಡುಗೆಗಳು ದೊರೆತಿವೆ. ಮೀನುಗಾರಿಕೆಗೆ ಬಿಟ್ಟರೆ ಕೇವಲ ಎರಡು ಯೋಜನೆಗಳಿಗಳನ್ನಷ್ಟೇ ಘೋಷಿಸಲಾಗಿದೆ ಎಂದು ಮಂಗಳೂರಿನ ಜನರು ಪ್ರತಿಕ್ರಿಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಫ್ಐ ಮುಖಂಡ ಬಿ.ಕೆ.ಇಮ್ತಿಯಾಝ್, ಜಿಲ್ಲೆಯ ಮಟ್ಟಿಗೆ ನಿರಾಶದಾಯಕ ಬಜೆಟ್ ಮಂಡಿಸಿದ್ದಾರೆ. ದ.ಕ, ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂಬುದು ಬಹಳ ಕಾಲದ ಬೇಡಿಕೆ. ಅದನ್ನು ಘೋಷಣೆ ಮಾಡದೆ ನಿರಾಶೆ ಮೂಡಿಸಿದ್ದಾರೆ. ರಾಜ್ಯದ ಯುವಜನರ ಅನುಕೂಲಕ್ಕಾಗಿ ಸರೋಜಿನಿ ಮಹಿಷಿ ವರದಿ ಅನುಷ್ಠಾನ ಮಾಡುವ ನಿರೀಕ್ಷೆ ಇತ್ತು. ಅದು ಕೂಡ ಘೋಷಣೆ ಆಗಿಲ್ಲ. ಅತಿಥಿ ಶಿಕ್ಷಕರ ಖಾಯಂ ಮಾಡುವ ಬೇಡಿಕೆ ಈಡೇರಿಲ್ಲ ಎಂದರು.
ಮೀನುಗಾರ ಮುಖಂಡ ರಾಜರತ್ನ ಸನಿಲ್ ಮಾತನಾಡಿ, ಹಲವು ನಿರೀಕ್ಷೆಗಳಿದ್ದರೂ ಈ ಬಜೆಟ್ನಲ್ಲಿ ಕೆಲವನ್ನಷ್ಟೆ ನೀಡಲಾಗಿದೆ. ದಕ್ಕೆಗಳ ಉನ್ನತೀಕರಣ ಮಾಡಬೇಕಿತ್ತು. ಆದರೆ ಹೆಚ್ಚಿನ ಹಣ ಘೋಷಣೆ ಮಾಡಿಲ್ಲ. ಇಲ್ಲಿಂದ ಅತ್ಯಧಿಕ ಪ್ರಮಾಣದಲ್ಲಿ ಮೀನುಗಳ ರಫ್ತು ನಡೆಯುತ್ತಿದ್ದರೂ ದಕ್ಕೆಗಳ ಅಭಿವೃದ್ಧಿ ಕಡೆಗಣಿಸಲಾಗಿದೆ. ಈ ಬಾರಿ ಮೀನುಗಾರಿಕೆಗೆ ಮಾಡಲಾಗಿರುವ ಘೋಷಣೆಗಳನ್ನು ಈ ಹಿಂದೆಯೂ ಮಾಡಲಾಗಿತ್ತು. ಆದರೆ ಅದೂ ಜಾರಿಯಾಗಿರಲಿಲ್ಲ. ಈ ಬಾರಿಯಾದರೂ ಆಗಲಿ ಎಂದು ನಿರೀಕ್ಷಿಸುತ್ತೇವೆ. ಒಟ್ಟಿನಲ್ಲಿ ಈ ಬಜೆಟ್ ನಮಗೆ ಮಿಶ್ರ ಫಲಿತಾಂಶ ಆಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಘೋಷಣೆಯಾದ ಯೋಜನೆಗಳು:
- ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಕರಾವಳಿಯ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು 1,500 ರೂ.ಗಳಿಂದ 3,000 ರೂ.ಗಳಿಗೆ ಹೆಚ್ಚಿಸಲಾಗುವುದು.
- ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಪ್ರಥಮ ಸಮುದ್ರ ಆಂಬುಲೆನ್ಸ್ ಅನ್ನು 7 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುವುದು.
- 10,000 ವಸತಿರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುವುದು.
- ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣವನ್ನು ಸ್ಥಾಪಿಸಲಾಗುವುದು.
- ಮಂಗಳೂರಿನ ಹಜ್ ಭವನದ ನಿರ್ಮಾಣ ಕಾಮಗಾರಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
- ಹಳೇ ಮಂಗಳೂರು ಬಂದರುಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ನಾಲ್ಕು ಬರ್ತ್‌ಗಳನ್ನು ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ.
- ಹಳೆ ಮಂಗಳೂರು ಬಂದರುಗಳಲ್ಲಿ ಸುಗಮ ಸಂಚಾರಕ್ಕಾಗಿ ಹೂಳೆತ್ತುವ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಗೊಳ್ಳಲಾಗುತ್ತಿದೆ.
- ಹಳೇ ಮಂಗಳೂರು ಬಂದರಿನಲ್ಲಿ 350 ಮೀ. ಉದ್ದದ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿಯನ್ನು 2024-25ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.
- ಹಳೆ ಮಂಗಳೂರು ಬಂದರುಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಆಧುನಿಕ ಹಡಗು ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಈ ವಲಯದಲ್ಲಿ ಇನ್ನೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸಲು ಆದ್ಯತೆ ನೀಡಲಾಗುವುದು.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರನ್ನು (ICTP) ಅಭಿವೃದ್ಧಿಪಡಿಸಲು ಐ.ಐ.ಟಿ. ಮದ್ರಾಸ್ ಸಹಯೋಗದೊಂದಿಗೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು.
- ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು.
ಇದನ್ನೂ ಓದಿ:1,300 ಕಿಮೀ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 4,000 ಕೋಟಿ ರೂ. ಅನುದಾನ ಘೋಷಣೆ