ದಕ್ಷಿಣ ಕನ್ನಡ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಜೇಶ್ ಚೌಟ 7 ಲಕ್ಷಕ್ಕೂ ಅಧಿಕ ಮತ ಪಡೆಯುವ ಮೂಲಕ ಅಮೋಘ ಗೆಲುವು ಸಾಧಿಸಿದ್ದಾರೆ. 1,49,208 ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರಿಗೆ ಸೋಲುಣಿಸಿದ್ದಾರೆ.
ಬಿಜೆಪಿ 33 ವರ್ಷಗಳ ವಿಜಯಯಾತ್ರೆ: ಈ ಬಾರಿಯೂ ಗೆಲುವು ಸಾಧಿಸುವ ಮೂಲಕ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ 33 ವರ್ಷಗಳ ವಿಜಯಯಾತ್ರೆ ಮುಂದುವರೆಸಿದೆ. 1991ರಲ್ಲಿ ಧನಂಜಯ್ ಕುಮಾರ್ ಬಿಜೆಪಿಯಿಂದ ಮೊದಲ ಬಾರಿಗೆ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದರು. ಅದರ ಬಳಿಕ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲೇ ಕಂಡಿಲ್ಲ.
ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರನ್ನು ಸೋಲಿಸಿ ಕ್ಷೇತ್ರ ಗೆದ್ದುಕೊಂಡ ಬಿಜೆಪಿ, ಇದೀಗ ನಾಲ್ಕನೇ ಸಂಸದರನ್ನು ಗೆಲ್ಲಿಸಿದೆ. ಧನಂಜಯ್ ಕುಮಾರ್, ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಬಳಿಕ ಇದೀಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರನ್ನು ಸೋಲಿಸಿ ಕ್ಯಾ.ಬ್ರಜೇಶ್ ಚೌಟ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ 2.75 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಈ ಸಲ ಮತಗಳ ಅಂತರ ಕಡಿಮೆಯಾಗಿದೆ. ಆದರೆ ಲಕ್ಷ ಮತಗಳ ಅಂತರದಿಂದಲೇ ವಿಜಯ ಸಾಧಿಸಲಾಗಿದೆ.
ನೋಟಾ ಮತಗಳ ಪ್ರಮಾಣ ಈ ಬಾರಿ ಹೆಚ್ಚಳವಾಗಿದೆ. ಬೆಳ್ತಂಗಡಿ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ನೋಟಾ ಮತದಾನದ ಅಭಿಯಾನ ಮಾಡಲಾಗಿತ್ತು. ಇದರಿಂದ ನೋಟಾ ಮತ ಹೆಚ್ಚಳ ಕಂಡಿದೆ.
1,741 ಮತಗಳು ತಿರಸ್ಕೃತ:ಅಂಚೆ ಮತದಾನದಲ್ಲಿ 1,741 ಮತಗಳು ತಿರಸ್ಕೃತವಾಗಿದೆ. ಒಟ್ಟು 7,032 ಮತಗಳಲ್ಲಿ 1,741 ಮತಗಳು ತಿರಸ್ಕೃತಗೊಂಡಿವೆ.
ದಕ್ಷಿಣ ಕನ್ನಡ ಕ್ಷೇತ್ರ ರಾಜಕೀಯ ಇತಿಹಾಸ:ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಹೊಸ ಅಭ್ಯರ್ಥಿಗಳನ್ನು ಘೋಷಿಸಿರುವ ಈ ಬಾರಿ ವಿಶೇಷವಾಗಿ ಗಮನ ಸೆಳೆದಿತ್ತು. ಕ್ಯಾಪ್ಟನ್ ಬ್ರಜೇಶ್ ಚೌಟ, ಪದ್ಮರಾಜ್ ಆರ್ ಇಬ್ಬರೂ ಕ್ಷೇತ್ರದ ಪ್ರಮುಖ ಪಕ್ಷದ ಅಭ್ಯರ್ಥಿಗಳಾದರೂ ಈವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.