ಕರ್ನಾಟಕ

karnataka

ETV Bharat / state

ಪಕ್ಷ ಸರಿಪಡಿಸುವಂತೆ ಹೈಕಮಾಂಡ್​ಗೆ ಪತ್ರ ಬರೆದ ಡಿವಿಎಸ್; ರೆಬೆಲ್ಸ್​ಗೆ ಬಿಸಿ ಮುಟ್ಟಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದರು ಮಾಜಿ ಸಿಎಂ - D V Sadananda gowda - D V SADANANDA GOWDA

ಪಕ್ಷ ಸರಿಪಡಿಸುವಂತೆ ಹೈಕಮಾಂಡ್​ಗೆ ನಾನು ಪತ್ರ ಬರೆದಿದ್ದೇನೆ ಎಂದು ಮಾಜಿ ಸಿಎಂ ಡಿ. ವಿ ಸದಾನಂದ ಗೌಡ ಅವರು ತಿಳಿಸಿದ್ದಾರೆ.

d-v-sadananda-gowda
ಮಾಜಿ ಸಿಎಂ ಡಿವಿ ಸದಾನಂದ ಗೌಡ (ETV Bharat)

By ETV Bharat Karnataka Team

Published : Jul 1, 2024, 5:43 PM IST

Updated : Jul 1, 2024, 6:09 PM IST

ಮಾಜಿ ಸಿಎಂ ಡಿ. ವಿ ಸದಾನಂದ ಗೌಡ (ETV Bharat)

ಬೆಂಗಳೂರು :ನಮ್ಮ ಪಕ್ಷ ಇಷ್ಟು ಹಾಳಾಗಲು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳದಿರೋದು ಕಾರಣ. ನಾನು ಪಕ್ಷದ ಅಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಸಸ್ಪೆಂಡ್ ಮಾಡಿದ್ದೇನೆ. ಎಷ್ಟೇ ದೊಡ್ಡವರಾಗಿದ್ದರೂ ಪಕ್ಷ ವಿರೋಧಿ ಆದವರನ್ನ ಬಿಡ್ತಿರಲಿಲ್ಲ. ಇಂದು ನಮ್ಮ ಪಕ್ಷದಲ್ಲಿ ಆ ಕೆಲಸ ಆಗುತ್ತಿಲ್ಲ. ಅದಕ್ಕಾಗಿಯೇ ನಾನು ಪಕ್ಷ ಸರಿ ಮಾಡಿ ಎಂದು ಹೈಕಮಾಂಡ್​ಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಸಿಎಂ ಡಿ. ವಿ ಸದಾನಂದಗೌಡ ಹೇಳಿದ್ದಾರೆ.

ಸಂಜಯನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪಕ್ಷ ಸರಿಯಾಗಬೇಕು ಎಂದೇ ನಾನು ಹೈಕಮಾಂಡ್​ಗೆ ಮೊನ್ನೆ ಪತ್ರ ಬರೆದಿದ್ದೇನೆ. ಪಕ್ಷ ಸರಿ ಮಾಡಿ ಅಂತಾ ಮನವಿ ಮಾಡಿದ್ದೇನೆ. ಈ ಪತ್ರವನ್ನು ಈಗ ನಾನು ರಿಲೀಸ್ ಮಾಡಲ್ಲ. ಪತ್ರದ ವಿಚಾರ ತಿಳಿದು ವಿಜಯೇಂದ್ರ ಅವರು ನನ್ನ ಮನೆಗೆ ಬಂದು ಚರ್ಚೆ ಮಾಡಿದರು. ಒಂದು ಪಕ್ಷ ಸರಿಯಾಗಬೇಕು, ಪಕ್ಷ ಶುದ್ಧೀಕರಣ ಆಗಬೇಕು, ಪಕ್ಷ ಸರಿಯಾಗದಿದ್ದರೆ ನನ್ನನ್ನ ಹೊರಗೆ ಹಾಕಲಿ. ನಾನು ಗುಂಪು ಕಟ್ಟಿಕೊಂಡು ಪಕ್ಷ ಸರಿ ಮಾಡಲು ಹೊರಟಿಲ್ಲ ಎಂದರು.

ನಮ್ಮ ನಿರೀಕ್ಷೆಯಂತೆ ಫಲಿತಾಂಶ ಸಿಕ್ಕಿಲ್ಲ. ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಘಟನಾತ್ಮಕ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ಅಭೂತ ಪೂರ್ವ ಗೆಲುವಿನ ಬಳಿಕವೂ ನಮ್ಮ ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಮೋದಿ ಇಮೇಜ್ ಮೇಲೆ ಚುನಾವಣೆ ನಡೆದು ಬಿಡುತ್ತದೆ ಅಂತ ಓವರ್ ಕಾನ್ಪಿಡೆನ್ಸ್​ನಿಂದ ನಮ್ಮ 9 ಸ್ಥಾನ ಕಳೆದುಕೊಳ್ಳಬೇಕಾಯಿತು. ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಕಾಂಗ್ರೆಸ್ ಇದ್ದಾಗಲೂ ಅನೇಕ ಬಾರಿ ಬಿಜೆಪಿ ಗೆದ್ದಿದೆ. ಆದರೆ ಈ ಬಾರಿ ಸಾಕಷ್ಟು ವಿಫಲವಾಗಿದೆ. ಇದಕ್ಕೆ ನನ್ನನ್ನೂ ಸೇರಿದಂತೆ ಎಲ್ಲರ ತಪ್ಪಿದೆ ಎಂದರು.

ಕೊಹ್ಲಿ 76 ರನ್ ಹೊಡೆದರೂ ಕಪ್ ತಗೊಂಡಿದ್ದು ರೋಹಿತ್ ಶರ್ಮ. ಹಾಗೆ ಎಲ್ಲರ ತಪ್ಪು ಪಕ್ಷಕ್ಕೆ ಹಿನ್ನಡೆಯಾಗಿದೆ. ನಮಗೆ ಹಳೆ ಮೈಸೂರಿನಲ್ಲಿ ಜೆಡಿಎಸ್‌ ಇತ್ತು. ಅವರ ಜೊತೆ ಸೇರಿದ್ದಕ್ಕೆ ಬಿಜೆಪಿ ಗೆದ್ದಿತು ಅಂತ ಜನ ಮಾತಾಡ್ತಿದ್ದಾರೆ. ಆದರೆ, ತುಮಕೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಎಲ್ಲೆಡೆ ಕಷ್ಟ ಆಗಿತ್ತು. ಜೆಡಿಎಸ್‌ ಜೊತೆ ಸೇರಿದ್ದರೂ ಕೂಡ ನಮ್ಮ ಗೆಲುವಿನ ಮಾರ್ಜಿನ್ ಕಡಿಮೆ ಆಗಿದೆ. ಇದೇ 4ರಂದು ರಾಜ್ಯ ಕಾರ್ಯಕಾರಿಣಿ ಸಭೆ ಇದೆ. ಎಲ್ಲಾ ಮಾಹಿತಿ ಪಡೆದು ಚರ್ಚೆ ಮಾಡುತ್ತೇವೆ. ದಾವಣಗೆರೆಯಲ್ಲಿ ಏಕೆ ಸೋತೆವು. ಇದೆಲ್ಲವೂ ಕರೆದು ಚರ್ಚೆಯಾಗಬೇಕಿದೆ. ಆ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಫೇಲ್ಯೂರ್ ಆದ್ರಾ ವಿಜಯೇಂದ್ರ?:ಪಕ್ಷ ಸಂಘಟನೆ ತಳಮಟ್ಟದಿಂದ ಆಗಬೇಕು. ಕೇವಲ ಸ್ಥಾನದಲ್ಲಿ ಕೂರಿಸಿದರೆ ಆಗಲ್ಲ. ತಳಮಟ್ಟದಲ್ಲಿ ಕೆಲಸ ಮಾಡುವ ಟೀಮ್ ಕೊರತೆ ಇದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ನಾನು ಆರೋಪ ಮಾಡಲ್ಲ. ಅವರು ಈಗಷ್ಟೇ ಬಂದಿದ್ದಾರೆ. ಬಂದ ತಕ್ಷಣ ಚುನಾವಣೆ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಕೇಡರ್ ಬೇಸ್ ಪಾರ್ಟಿ. ಕಾರ್ಯಕರ್ತರನ್ನ ಕಳೆದುಕೊಳ್ತಿದ್ದೇವೆ. ‌ಇದು ನಮಗೆ ಎಚ್ಚರಿಕೆಯ ಗಂಟೆ. ನಮ್ಮಲ್ಲಿ ಶಕ್ತಿ ಇದೆ, ಕಮಿಟೆಡ್ ಕಾರ್ಯಕರ್ತರಿದ್ದಾರೆ. ಆದರೆ, ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಫೇಲ್ಯೂರ್ ಆಗಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದರು.

ಸಂಘಟನೆ ಶಿಥಿಲ ಆದಾಗ ಸಂಘಟನೆಗೆ ಹೆದರುವ ವಿರೋಧಿಗಳು ಹೆದರದೇ ಕುಳಿತುಕೊಳ್ಳುತ್ತಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾವು ಯಾವುದೇ ವಿಶ್ಲೇಷಣೆ ಮಾಡಬೇಕಾದರೆ ಜವಾಬ್ದಾರಿ ಇರಬೇಕು. ಜವಾಬ್ದಾರಿ ಇಲ್ಲದೇ ವಿಶ್ಲೇಷಣೆ ಮಾಡಬಾರದು. ಅಶೋಕ್ ಹಿಂದಿನಿಂದಲೂ ಆಡಳಿತದಲ್ಲೇ ಇದ್ದರು. ಹಾಗಾಗಿ ಅವರ ಮನಸ್ಥಿತಿ ಆಡಳಿತದ ಕಡೆಯೇ ಇದೆ. ವಿಪಕ್ಷ ನಾಯಕ ಅಧ್ಯಯನ ಮಾಡಬೇಕು. ಅಂಕಿ - ಅಂಶದ ಬಗ್ಗೆ ಮಾಹಿತಿ ಇರಬೇಕು ಎಂದು ಹೇಳಿದರು.

ವಿಪಕ್ಷ ನಾಯಕ ಅಂದರೆ ಬರೀ ಜಗಳ ಮಾಡುವುದಲ್ಲ. ಭಾರಿ ಅಧ್ಯಯನದ ಅಗತ್ಯ ಇದೆ. ಬರಿ ಓಡಾಟದಿಂದ ಪಕ್ಷದ ನಾಯಕನಾಗಿ ಬೆಳವಣಿಗೆ ಆಗಬಹುದು. ವಿಪಕ್ಷ ನಾಯಕ ಆಗಿ ಅಲ್ಲ. ಅಧ್ಯಯನ, ಅಂಕಿ - ಅಂಶ ಮತ್ತು ಸೂಕ್ತ ಸಮಯಕ್ಕೆ ಪ್ರತಿರೋಧ ಒಡ್ಡುವ ನಾಯಕರ ಅವಶ್ಯಕತೆ ವಿಧಾನಸಭೆ ಮತ್ತು ವಿಧಾನ ಪರಿಷತ್​ನಲ್ಲಿ ಇದೆ. ಸಿದ್ದರಾಮಯ್ಯ ಅವರನ್ನು ಎದುರಿಸಲು ಸಾಮಾನ್ಯರಿಗೆ ಸಾಧ್ಯ ಇಲ್ಲ. ಪಕ್ಷ ವಿರೋಧಿ ಮಾತುಗಳನ್ನಾಡಿದವರಿಗೆ ಮಣೆ ಹಾಕಲು ಹೊರಡುತ್ತಿರುವ ಅಶಿಸ್ತು, ಪಕ್ಷ ಇಂದು ಇಷ್ಟು ಶಿಥಿಲ ಆಗಲು ಕಾರಣ. ಇದನ್ನು ನಾನು ಬಹಳ ನೇರವಾಗಿ ಹೇಳುತ್ತೇನೆ ಎಂದರು.

ನಾನು ಅಧ್ಯಕ್ಷನಾಗಿದ್ದಾಗ ಕಠಿಣ ಕ್ರಮ ಕೈಗೊಂಡಿದ್ದೆ:ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಯತ್ನಾಳ್ ಅವರನ್ನು ಕೇಂದ್ರದ ಒಪ್ಪಿಗೆ ಪಡೆದು ಅಮಾನತು ಮಾಡಿದ್ದೆ. ಇದರಿಂದ ಅಂದು ಪಕ್ಷ ಬೆಳೆಯಲು ಸಾಧ್ಯವಾಯಿತು. ಇಂದು ನಮ್ಮ ಪಕ್ಷದಲ್ಲಿ ಆ ಕೆಲಸ ಆಗುತ್ತಿಲ್ಲ. ಬೇರೆ ಪಕ್ಷದಂತೆ ಬಿಜೆಪಿ ಆಗಬಾರದು. ಸಂಘಟನೆಗೆ ವಿರೋಧ ಮಾಡಿ ಕೆಲಸ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವ ಕೆಲಸವಾಗಲೇಬೇಕು ಎಂದು ಹೇಳಿದರು.

ಡಿ.ಕೆ ಶಿವಕುಮಾರ್ ಪರ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಡಿವಿಎಸ್, ಕಾಂಗ್ರೆಸ್ ಪಕ್ಷದಲ್ಲಿ ಯಾರು ಸಿಎಂ ಆಗಬೇಕು ಅಂತಾ ಬೇರೆ ಪಕ್ಷದವರು ಮಾತಾಡುವುದು ಹುಚ್ಚುತನ. ಸ್ವಾಮೀಜಿ ಒಂದು ಸಮುದಾಯದ ನಾಯಕರು. ಅವರ ಸಮುದಾಯದ ಪರವಾಗಿ ಸ್ವಾಮೀಜಿ ಮಾತಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯ ಪರ ಸ್ವಾಮೀಜಿಗಳು ಮಾತಾಡಿಲ್ವಾ?. ಅಂದು ಬಿ. ವೈ ರಾಘವೇಂದ್ರ ಪರ ಶಾಮನೂರು ಶಿವಶಂಕರಪ್ಪ ಮಾತಾಡಿಲ್ವಾ?. ಕೆ. ಎನ್ ರಾಜಣ್ಣ ಅವರಿಗೆ ಹೇಳುತ್ತೇನೆ, ಇಲ್ಲಿ ಸರ್ಕಾರ ಬೀಳುತ್ತದೆ, ಅಲ್ಲಿ ಹೋಗಿ ಸ್ವಾಮೀಜಿ ಆಗುತ್ತೀರಾ ನೋಡಿ. ಕಾವಿ ಬಟ್ಟೆ ಬೇಕಾದರೆ ನಾವೇ ಕೊಡುತ್ತೇವೆ. ಶಿಷ್ಯತ್ವ ಸ್ವೀಕಾರ ಮಾಡುತ್ತಾರಾ? ನೋಡಲಿ ಎಂದರು.

ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ನನ್ನ ಇತ್ತೀಚೆಗೆ ಕಾಂಗ್ರೆಸ್​ಗೆ ಕರೆದಿದ್ದರು. ನಾಲ್ಕು ಪ್ಯಾಂಟ್ ಶರ್ಟ್ ಮಾತ್ರ ತನ್ನಿ, 28ರಲ್ಲಿ ಒಂದು ಕ್ಷೇತ್ರದಲ್ಲಿ ಗೆಲ್ಲಿಸಿ ಕಳುಹಿಸ್ತೇವೆ ಅಂದರು. ನಾನು ಮತ್ತೊಬ್ಬ ಜಗದೀಶ್ ಶೆಟ್ಟರ್ ಆಗಲು ರೆಡಿ ಇಲ್ಲ ಅಂತಾ ನೇರವಾಗಿ ಹೇಳಿದ್ದೆ. ನಾನು ಶಕ್ತಿ‌ಪ್ರದರ್ಶನ ಮಾಡಲ್ಲ. ಸದಾನಂದ ಗೌಡರಿಗೆ ಶಕ್ತಿ ಇದ್ದರೆ ಮಾಡುತ್ತಾರೆ, ಇಲ್ಲದಿದ್ದರೆ ಸುಮ್ಮನೆ ಇರುತ್ತಾರೆ ಎಂದು ಹೇಳಿದರು.

ಈಶ್ವರಪ್ಪ ಮತ್ತೆ ಪಕ್ಷಕ್ಕೆ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಅವರು ಮೋದಿ ಮತ್ತೆ ಪ್ರಧಾನಿ ಆಗಬೇಕು ಅಂತ ಬಂಡಾಯ ಎದ್ದು ಚುನಾವಣೆಗೆ ಸ್ಪರ್ಧೆ ಮಾಡಿರೋದು ಸರಿಯಲ್ಲ ಎಂದು ಹೇಳಿದರು.

ಹೊಸ ಕಾನೂನು ಸ್ವಾಗತ : ಮೂರು ಹೊಸ ಕಾನೂನು ಜಾರಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ಈ ಕಾನೂನನ್ನ ಬಹಳಷ್ಟು ಚರ್ಚೆ ಮಾಡಿ ತರಲಾಗಿದೆ. ಬ್ರಿಟಿಷರಿಗೆ ಬೇಕಾದ ಕಾನೂನು ತರಲಾಗಿತ್ತು. ಈಗ ಭಾರತ ಸಾಕಷ್ಟು ಮುಂದೆ ಬಂದಿದೆ. ನಮ್ಮ ಸರ್ಕಾರ ಸುಧಾರಣೆ ತರಲು ನಿರ್ಧರಿಸಿದೆ. ಬದಲಾದ ವಿದ್ಯಮಾನದಲ್ಲಿ ಗುಲಾಮಗಿರಿಯ ಕಾನೂನು ತೆಗೆದು, ಸ್ವತಂತ್ರ ಕಾನೂನು ತರಲಾಗಿದೆ ಎಂದರು.

ಕೋರ್ಟ್​ನಲ್ಲಿ ಸಾಕಷ್ಟು ಪ್ರಕರಣ ಬಾಕಿ ಉಳಿದಿದೆ. ಇನ್ವೆಸ್ಟಿಗೇಷನ್ ಏಜೆನ್ಸಿ‌ಗಳಿಂದ ಬಹಳಷ್ಟು ತೊಂದರೆ ಆಗುತ್ತಿತ್ತು‌. ನಮ್ಮ ಮಕ್ಕಳ ಮೇಲೆ ನಡೆಯುತ್ತಿರೋ ದೌರ್ಜನ್ಯ ತಡೆಯಬೇಕಿದೆ. ಮದುವೆ ವಿಚಾರದಲ್ಲಿ ಗಂಡ-ಹೆಂಡತಿಗೆ ವಿಶೇಷ ಮಹತ್ವ ಇದೆ. ಅದಕ್ಕೆ ನಾಲ್ಕನೇ ತಿದ್ದುಪಡಿ ಆಗಿದೆ. 15 ದಿನದಲ್ಲಿ ಕಾನೂನಿನಲ್ಲಿ ಮಾಹಿತಿ ನೀಡಬೇಕು. ಅಧ್ಯಯನ ಮಾಡಿ ಹೊಸ ಕಾನೂನು ತರಲಾಗಿದೆ. ಸ್ವತಂತ್ರ ಭಾರತ ಅನ್ನೋದಕ್ಕೆ ಈ ಮೂರು ಕ್ರಿಮಿನಲ್ ಪ್ರೊಸೀಜರ್ ತಿದ್ದುಪಡಿ ಆಗಿದೆ. ಅನಗತ್ಯವಾಗಿ ಯಾರನ್ನೋ ಸಿಲುಕಿಸೋ ಪ್ರಕರಣ ಕಡಿಮೆ ಆಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಪ್ರಜ್ವಲ್ ಇಲ್ಲ ಅಂತಾ ರೇವಣ್ಣರನ್ನು ಬಲಿಪಶು ಮಾಡಲಾಗಿದೆ, ಇದರ ಸೂತ್ರಧಾರ ಡಿಕೆಶಿ: ಸದಾನಂದ ಗೌಡ - D V SADANANDA GOWDA

Last Updated : Jul 1, 2024, 6:09 PM IST

ABOUT THE AUTHOR

...view details