ಬೆಂಗಳೂರು : ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ (ಡಿಡಿಯುಟಿಟಿಎಲ್) ನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ನಿಗಮದ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಎಸ್. ವೀರಯ್ಯ ಅವರನ್ನು ಬಂಧಿಸಿದ್ದಾರೆ.
ಡಿ. ಎಸ್ ವೀರಯ್ಯ ಅವರು ನಿಗಮದ ಅಧ್ಯಕ್ಷರಾಗಿದ್ದ 2021ರಿಂದ 2023ರ ಅವಧಿಯಲ್ಲಿ ಡಿಡಿಯುಟಿಟಿಎಲ್ ನಿಗಮದಲ್ಲಿನ ಗುತ್ತಿಗೆ ಹಂಚಿಕೆಯಲ್ಲಿ ಸುಮಾರು 47.10 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ. ಎನ್ ಶಿವಪ್ರಕಾಶ್, ಕಳೆದ ಸೆಪ್ಟೆಂಬರ್‌ನಲ್ಲಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರ ಅನ್ವಯ ದಾಖಲಾಗಿದ್ದ ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಅಧಿಕಾರಿಗಳು ಅದರ ಮಾಜಿ ವ್ಯವಸ್ಥಾಪಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಾಣಿಜ್ಯ ಪ್ರಚಾರ ಶಾಖೆಯ ಹಾಲಿ ಉಪ ನಿರ್ದೇಶಕರಾಗಿದ್ದ ಎಸ್. ಶಂಕರಪ್ಪ ಅವರನ್ನ ಮೇ ತಿಂಗಳಿನಲ್ಲಿ ಬಂಧಿಸಿದ್ದರು. ಸದ್ಯ ಮೈಸೂರಿನಲ್ಲಿ ವೀರಯ್ಯ ಅವರನ್ನ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.