ಕರ್ನಾಟಕ

karnataka

ETV Bharat / state

ಎಚ್ಚರ..! ಅಪರಿಚಿತ ಎಪಿಕೆ ಫೈಲ್ ತುಂಬಾ ಅಪಾಯಕಾರಿ; ನಿಮ್ಮ ಮೊಬೈಲ್​ನಲ್ಲಿದ್ದರೆ ಈ ವಿಧಾನದ ಮೂಲಕ ತೆಗೆದುಬಿಡಿ

ಅಪರಿಚಿತ ಎಪಿಕೆ ಫೈಲ್​​ಗಳ ಬಳಕೆ ಮತ್ತು ಅವುಗಳಿಂದ ಉಂಟಾಗುವ ಅಪಾಯದ ಕುರಿತು ಸೈಬರ್ ತಜ್ಞ ಅನಂತ ಪ್ರಭು ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ನಮ್ಮ ಪ್ರತಿನಿಧಿ ವಿನೋದ್ ಪುದು​ ಅವರ ವಿಶೇಷ ವರದಿ ಇಲ್ಲಿದೆ.

cyber-expert-anantha-prabhu
ಸೈಬರ್ ತಜ್ಞ ಅನಂತ ಪ್ರಭು (ETV Bharat)

By ETV Bharat Karnataka Team

Published : Nov 30, 2024, 4:39 PM IST

Updated : Nov 30, 2024, 4:57 PM IST

ಮಂಗಳೂರು (ದಕ್ಷಿಣ ಕನ್ನಡ) : ಈಗ ಎಲ್ಲರ ಕೈಯಲ್ಲಿಯೂ ಸ್ಮಾರ್ಟ್ ಫೋನ್ ಇದೆ. ಈ ಮೊಬೈಲ್​ನಲ್ಲಿ ಇತ್ತೀಚೆಗೆ ಅಪರಿಚಿತ ಎಪಿಕೆ‌ ಫೈಲ್​ಗಳನ್ನು ಇನ್​ಸ್ಟಾಲ್ ಮಾಡಿಸಿ ವಂಚನೆ ಮಾಡುವ ಪ್ರಕರಣಗಳು ವರದಿಯಾಗುತ್ತಿದೆ. ಈ ಹಿನ್ನೆಲೆ ಅಪರಿಚಿತ ಎಪಿಕೆ ಫೈಲ್ ಎಷ್ಟು ಅಪಾಯಕಾರಿ ಎಂಬ ಕುರಿತು ಮಾಹಿತಿ ನೀಡುವ ವಿಶೇಷ ವರದಿ ಇಲ್ಲಿದೆ.

ಅಪರಿಚಿತ ಎಪಿಕೆ (APK) ಫೈಲ್‌ಗಳ ಬಳಕೆ ಮತ್ತು ಅವುಗಳಿಂದ ಉಂಟಾಗುವ ಅಪಾಯದ ಕುರಿತು ಸೈಬರ್ ತಜ್ಞ ಅನಂತ ಪ್ರಭು ಅವರು ಈಟಿವಿ ಭಾರತದ ಜೊತೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಅನಧಿಕೃತ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಇನ್​ಸ್ಟಾಲ್ ಮಾಡುವುದು ದೊಡ್ಡ ಅಪಾಯವನ್ನು ಉಂಟುಮಾಡುತ್ತದೆ. ಇದನ್ನು ತಪ್ಪಿಸಲು ಸರಿಯಾದ ಎಚ್ಚರಿಕೆಗಳು ಅಗತ್ಯವಿದೆ ಎಂದಿದ್ದಾರೆ.

ಏನಿದು ಅಪರಿಚಿತ ಎಪಿಕೆ ಫೈಲ್ ಮತ್ತು ಏಕೆ ಇದು ಅಪಾಯಕಾರಿ? :ಅಪರಿಚಿತಎಪಿಕೆ ಫೈಲ್‌ಗಳು ಅನಧಿಕೃತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ವೇದಿಕೆಗಳಂತೆ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಅನಧಿಕೃತವಾಗಿ ಆಪ್‌ಸ್ಟೋರ್‌ಗಳಿಂದ ಡೌನ್‌ಲೋಡ್ ಮಾಡಲಾಗುತ್ತದೆ. ಇವುಗಳಲ್ಲಿ ಹಾನಿಕಾರಕ ಮಾಲ್‌ವೇರ್ ಅಥವಾ ಡೇಟಾ ಕದಿಯುವ ಕೋಡ್‌ಗಳು ಇರಬಹುದು ಎಂದು ಹೇಳಿದ್ದಾರೆ.

ಸೈಬರ್ ತಜ್ಞ ಅನಂತ ಪ್ರಭು ಅವರು ಮಾತನಾಡಿದರು (ETV Bharat)

'ಮೊದಲನೆಯದಾಗಿ ಯಾರೂ ಅಪರಿಚಿತ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಬಾರದು. ಪ್ಲೇಸ್ಟೋರ್‌ ಮೂಲಕ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಕು. ಏಕೆಂದರೆ ಪ್ಲೇ ಸ್ಟೋರ್‌ನಲ್ಲಿ ಗೂಗಲ್‌ ತನ್ನ ಸುರಕ್ಷತಾ ವ್ಯವಸ್ಥೆ ಮೂಲಕ ಆ್ಯಪ್‌ಗಳನ್ನು ಪರಿಶೀಲಿಸುತ್ತದೆ. ಆದರೆ, ಎಪಿಕೆ ಮೂಲಕ ಇನ್‌ಸ್ಟಾಲ್ ಮಾಡಿದರೆ, ಈ ಪ್ರಕ್ರಿಯೆಯನ್ನು ಬೈಪಾಸ್ ಮಾಡಲಾಗುತ್ತದೆ. ಇದು ಅತ್ಯಂತ ಅಪಾಯಕಾರಿ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೈಬರ್ ತಜ್ಞರ ಸಲಹೆಗಳು :

1. ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಸುರಕ್ಷಿತ ವಿಧಾನ

ಮೊದಲ ಆಯ್ಕೆ: ಗೂಗಲ್ ಪ್ಲೇಸ್ಟೋರ್‌ ಮೂಲಕ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅತ್ಯುತ್ತಮ. ಪ್ಲೇಸ್ಟೋರ್‌ನಲ್ಲಿ ಗುಣಮಟ್ಟದ ತಪಾಸಣೆ ನಡೆಯುತ್ತದೆ.

ಎರಡನೇ ಆಯ್ಕೆ: ಸ್ಯಾಮ್‌ಸಂಗ್ ಸ್ಟೋರ್ ಅಥವಾ MI ಸ್ಟೋರ್‌ಗಳನ್ನು ಬಳಸಬಹುದು. ಆದರೆ, ಇದು ಹೆಚ್ಚು ಶ್ರೇಯಸ್ಕರವಲ್ಲ.

ಮೂರನೇ ಆಯ್ಕೆ: ಅಪರಿಚಿತ ಎಪಿಕೆ ಫೈಲ್‌ಗಳ ಮೂಲಕ ಡೌನ್‌ಲೋಡ್ ಮಾಡುವುದು ಅಪಾಯಕರ. ಇದನ್ನು ಸಂಪೂರ್ಣವಾಗಿ ತಡೆಯಬೇಕು.

ಅಪರಿಚಿತ ಎಪಿಕೆ ಫೈಲ್‌ಗಳ ಅಪಾಯ:

  • ಮಾಲ್‌ವೇರ್ ಇರುವ ಅವಕಾಶ ಹೆಚ್ಚು.
  • ನಿಮ್ಮ ವೈಯಕ್ತಿಕ ಮಾಹಿತಿ, ಫೋಟೋ, ವಿಡಿಯೋಗಳನ್ನು ಕದಿಯುವ ಅಪಾಯ.
  • ಬ್ಯಾಂಕ್ OTP-ಗಳನ್ನು ಕದಿಯುವ ಅಪಾಯ.

ಅಪರಿಚಿತ ಎಪಿಕೆ ಫೈಲ್ ಡೌನ್‌ಲೋಡ್ ಮಾಡಬೇಕಾದ ಕ್ರಮಗಳು

  • ಅನಾಮಧೇಯ ಮೂಲಗಳಿಂದ ಆ್ಯಪ್‌ಗಳನ್ನು ಸ್ಥಾಪಿಸಲು ತಡೆಯಿರಿ :
    ನಿಮ್ಮ ಫೋನ್‌ನ Settings > App Permissions > Install from Unknown Sources ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.
    ಪ್ರೀಮಿಯಂ ಆ್ಯಂಟಿ-ವೈರಸ್ ಬಳಕೆ :ಹಾನಿಕಾರಕ ಆ್ಯಪ್‌ಗಳನ್ನು ಪತ್ತೆಹಚ್ಚಲು ಮತ್ತು ಡೀಪ್ ಸ್ಕ್ಯಾನ್ ನಡೆಸಲು ಪ್ರೀಮಿಯಂ ಆ್ಯಂಟಿ-ವೈರಸ್ ಆ್ಯಪ್ ಬಳಸಿ.
    ಫ್ಯಾಕ್ಟರಿ ರಿಸೆಟ್ :ಫೋನ್‌ವನ್ನು ಫ್ಯಾಕ್ಟರಿ ಸ್ಥಿತಿಗೆ ಮರುಸ್ಥಾಪನೆ ಮಾಡುವುದು ಅತ್ಯಂತ ಸುರಕ್ಷಿತ ವಿಧಾನ.
    ಆ್ಯಪ್ ಅನುಮತಿಗಳ ಪರಿಶೀಲನೆ :ಆ್ಯಪ್‌ಗಳಿಗೆ ಅಗತ್ಯವಿಲ್ಲದ GPS, ಕ್ಯಾಮೆರಾ, ಕಾಂಟ್ಯಾಕ್ಟ್, ಸ್ಟೋರೇಜ್ ಅನುಮತಿಗಳನ್ನು ನೀಡಬಾರದು.
    OTP ಹಂಚಿಕೆ ಅಪಾಯ :ಅನಿವಾರ್ಯವಾಗಿ ಯಾರೊಂದಿಗೆ ಕೂಡ OTP ಹಂಚಿಕೆ ಮಾಡಬೇಡಿ. ಹಂಚಿದರೆ ನಿಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆ ಇದೆ.
    ಅನಂತ ಪ್ರಭು ಅವರ ಎಚ್ಚರಿಕೆ :"ಮಾಲಿಷಿಯಸ್ ಆ್ಯಪ್‌ಗಳು ನಮ್ಮ ವೈಯಕ್ತಿಕ ಡೇಟಾವನ್ನು ಕದಿಯುತ್ತದೆ. ನಿಮ್ಮ ಫೋನ್‌ನ್ನು ನಿಷ್ಕ್ರಿಯಗೊಳಿಸಲು ಫ್ಯಾಕ್ಟರಿ ರಿಸೆಟ್ ಮಾಡುವಂತೆ ನಾನು ಶಿಫಾರಸು ಮಾಡುತ್ತೇನೆ. ಅಪಾಯಕಾರಿ ಆ್ಯಪ್‌ಗಳಿಂದ ದೂರವಿರುವುದು ಅತ್ಯಂತ ಮುಖ್ಯ" ಎಂದು ಅವರು ಎಚ್ಚರಿಸಿದ್ದಾರೆ.

ಅಪರಿಚಿತ ಎಪಿಕೆ ಫೈಲ್‌ಗಳನ್ನು ಬಳಕೆ ಮಾಡುವುದು ಅಪಾಯವನ್ನು‌ ಮೈಮೇಲೆ ಎಳೆದುಕೊಂಡಂತೆ. ಫೋನ್‌ ಮತ್ತು ವೈಯಕ್ತಿಕ ಮಾಹಿತಿಯನ್ನು ಕಾಪಾಡಿಕೊಳ್ಳುವುದು ನಮ್ಮದೇ ಜವಾಬ್ದಾರಿಯಾಗಿದೆ ಎಂದು ಅವರು ಹೇಳುತ್ತಾರೆ.

ಎಪಿಕೆ ಫೈಲ್ ಕಳುಹಿಸಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಂಚನೆ ಪ್ರಕರಣ :ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಸಂಚಾರ ನಿಯಮ ಉಲ್ಲಂಘನೆಯ ಅಪರಿಚಿತ ಎಪಿಕೆ ಫೈಲ್ ಕಳುಹಿಸಿ ರೂ. 1.31 ಲಕ್ಷ ವಂಚನೆ ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್ 24 ರಂದು ರಾತ್ರಿ 8-44 ಗಂಟೆಗೆ ವ್ಯಕ್ತಿಯೊಬ್ಬರ ವಾಟ್ಸಾಪ್ ನಂಬರ್​ಗೆ +917878422870ನೇ ವಾಟ್ಸಾಪ್ ನಂಬರ್​ನಿಂದ ಮೇಸೆಜ್ ಬಂದಿತ್ತು. ಈ ಮೇಸೆಜ್​ನಲ್ಲಿ VAHAN PARIVAHAN.apk ಫೈಲ್ ಬಂದಿತ್ತು. ಈ ಫೈಲ್ ನಲ್ಲಿ KA 03 MA 0606 ಎಂಬ ವಾಹನ ಸಂಖ್ಯೆ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಕಂಡು ಬಂದಿತ್ತು.

ಈ ವ್ಯಕ್ತಿ VAHAN PARIVAHAN.apk ಫೈಲ್ ಡೌನ್ ಲೋಡ್ ಮಾಡಿದ ಕೂಡಲೇ ಮೊಬೈಲ್​ಗೆ 16 ಓಟಿಪಿಗಳು ಬಂದಿವೆ. ಹಾಗೂ ಬಂದ ಓಟಿಪಿಗಳನ್ನು ಇವರು ಯಾರಿಗೂ ಶೇರ್ ಮಾಡಿರುವುದಿಲ್ಲ. ನಂತರ FLIPKART ಹಾಗೂ AMAZON ನಲ್ಲಿ ಇವರ ಕ್ರೆಡಿಟ್ ಕಾರ್ಡ್ ಮುಖಾಂತರ ರೂ. 30,400/- ರೂ ಹಾಗೂ ಡೆಬಿಟ್ ಕಾರ್ಡ್ ಮುಖಾಂತರ 16,700/- ಮತ್ತು ಪೇ ಲೇಟರ್​ನಲ್ಲಿ 71,496/- ರೂ ಹಣ ವರ್ಗಾವಣೆ ಆದ ಬಗ್ಗೆ ಮೊಬೈಲ್​ಗೆ ಮೆಸೇಜ್ ಬಂದಿದೆ. ಕೂಡಲೇ ಇವರು ತನ್ನ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್​ನ್ನು ಬ್ಲಾಕ್ ಮಾಡಿದ್ದಾರೆ.

ಈ ರೀತಿಯಾಗಿ ಅಪರಿಚಿತ ವ್ಯಕ್ತಿಯು ಆನ್​ಲೈನ್ ಮೂಲಕ ವ್ಯಕ್ತಿಯ ಆಕ್ಸಿಸ್ ಬ್ಯಾಂಕ್ ಖಾತೆಯಿಂದ FLIP KART ನಲ್ಲಿ One Plus Mobile Phone Rs. 39,398/-, Motorola edge Mobile Phone Rs 32,098/-, Airpod Rs 12,800/- ಮತ್ತು ರೂ 14,700/- ಹಾಗೂ 29,400/- ರೂ ಬೆಲೆಯ FLIP KART VOUCHER ಗಳನ್ನು ಹಾಗೂ Amazonನಲ್ಲಿ ರೂ 3000/- ಗಿಫ್ಟ್ ವೋಚರ್​ಗಳನ್ನು ರಾಹುಲ್, ಪಂಚಶೀಲ್ ವಿಹಾರ್ ಆದರ್ಶ್ ಹಾಸ್ಪೆಟಲ್ ಹತ್ತಿರ, ದೆಹಲಿ ಪ್ರೆಸ್ ಎನ್ ಕ್ಲೇವ್ ಸಾಕೇತ್, ನವದೆಹಲಿ- 110017, ಮೊಬೈಲ್ ನಂಬರ್ 6232866722 ನೇ ವಿಳಾಸಕ್ಕೆ ಆರ್ಡರ್ ಮಾಡಿರುತ್ತಾರೆ.

ಈ ರೀತಿ ಅಪರಿಚಿತ ವ್ಯಕ್ತಿಯು ಆನ್​ಲೈನ್ ಮೂಲಕ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಒಟ್ಟು ರೂ. 1,31,396/- ರೂ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ. ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ.

ಇದನ್ನೂ ಓದಿ :ಮಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂಪಾಯಿ ವಂಚನೆ

Last Updated : Nov 30, 2024, 4:57 PM IST

ABOUT THE AUTHOR

...view details