ಕರ್ನಾಟಕ

karnataka

ETV Bharat / state

ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ಕಾವೇರಿ ನೀರು ಬಿಡಲು ಕರ್ನಾಟಕಕ್ಕೆ ಸಿಡಬ್ಲ್ಯುಆರ್​ಸಿ ಶಿಫಾರಸು - Cauvery water - CAUVERY WATER

ಜುಲೈ 12 ರಿಂದ ಜುಲೈ 31ರ ವರೆಗೆ ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ಕಾವೇರಿ ನೀರು ಬಿಡುವಂತೆ ಸಿಡಬ್ಲ್ಯೂಆರ್​ಸಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

krs
ಕೆಆರ್​ಎಸ್ (ETV Bharat)

By ETV Bharat Karnataka Team

Published : Jul 11, 2024, 7:22 PM IST

ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ಬೆಂಗಳೂರು :ತಮಿಳುನಾಡಿಗೆ ನಾಳೆ ಜುಲೈ 12 ರಿಂದ ಜುಲೈ 31ರವರೆಗೆ ಪ್ರತಿದಿನ 1 ಟಿಎಂಸಿ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್​ಸಿ) ಕರ್ನಾಟಕ ರಾಜ್ಯಕ್ಕೆ ಶಿಫಾರಸು ಮಾಡಿದೆ.

ಕಾವೇರಿ ನೀರು ನಿಯಂತ್ರಣ ಮಂಡಳಿ ಇಂದು ನಡೆಸಿದ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಂಡು ಜುಲೈ ಅಂತ್ಯದವರೆಗೆ ದಿನನಿತ್ಯ 11,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸೂಚಿಸಿದೆ.

ಇಂದಿನ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಸಂಬಂಧ ಜುಲೈ 25 ರವರೆಗೆ ಕಾದು ನೋಡಿ, ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ನಿರ್ಧಾರ ಪ್ರಕಟಿಸುವುದು ಸೂಕ್ತ ಎನ್ನುವ ವಾದವನ್ನು ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಕೀಲರ ತಂಡ ಮಂಡಿಸಿತು.

ಕಾವೇರಿಯ 4 ಜಲಾಶಯಗಳಲ್ಲಿ ಒಳಹರಿವಿನ ಕೊರತೆ ಇರುತ್ತದೆ. ಜೂನ್ ಒಂದರಿಂದ ಜುಲೈ 9 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವು 41.651 ಟಿಎಂಸಿ ಇರುತ್ತದೆ. ಕರ್ನಾಟಕದ ಕೆಆರ್​ಎಸ್, ಕಬಿನಿ ಸೇರಿದಂತೆ ನಾಲ್ಕು ಜಲಾಶಯಗಳಲ್ಲಿ ಸಂಚಿತ ಒಳಹರಿವಿನ ಕೊರತೆಯು ಶೇ 28,71ರಷ್ಟಿದೆ.

ಸದ್ಯ ಕರ್ನಾಟಕದಲ್ಲಿನ ಕಾವೇರಿ ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆಯು 58.66 ಟಿಎಂಸಿ ಇದ್ದು, ಮೆಟ್ಟೂರಿನಿಂದ 4.905 ಟಿಎಂಸಿ ಮತ್ತು ಭವಾನಿಯಿಂದ 0.618 ಟಿಎಂಸಿ (ಒಟ್ಟು 5.542 ಟಿಎಂಸಿ) ನದಿಗೆ ಬಿಡುಗಡೆ ಮಾಡಿರುವುದಲ್ಲದೇ ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಇರುತ್ತದೆ.

ನೀರು ಬಿಡುಗಡೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಮಿತಿಯು ಜುಲೈ 25ರ ತನಕ ಕಾಯುವುದು ಸೂಕ್ತವಾಗಿದೆ. ನಂತರ ವಸ್ತು ಸ್ಥಿತಿಯನ್ನು ಸಮಂಜಸವಾಗಿ ಪರಿಗಣಿಸಿ ತಮಿಳುನಾಡಿಗೆ ಕರ್ನಾಟಕದ ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಸೂಕ್ತ ನಿರ್ಧಾರವನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ತೆಗೆದುಕೊಳ್ಳಬಹುದಾಗಿದೆ ಎಂದು ಕರ್ನಾಟಕ ತಂಡ ತನ್ನ ಮನವಿ ಸಲ್ಲಿಸಿತು.

ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ತಮಿಳುನಾಡು ಸರ್ಕಾರ ತನ್ನ ಮನವಿ ಸಲ್ಲಿಸಿ ಹಿಂದಿನ ಜಲ ವರ್ಷದಲ್ಲಿ, ಫೆಬ್ರವರಿ 2024 ರಿಂದ ಮೇ 2024 ರ ಅವಧಿಗೆ ಕರ್ನಾಟಕವು ನೀರಿನ ಹರಿವನ್ನು ಬಿಡುಗಡೆ ಮಾಡಿರುವುದಿಲ್ಲ. ಪ್ರಸಕ್ತ ಜಲ ವರ್ಷದಲ್ಲಿ ಮಳೆ ಪರಿಸ್ಥಿತಿ ಸಾಮಾನ್ಯವಾಗಿದ್ದು, ಕರ್ನಾಟಕವು ಸಾಮಾನ್ಯ ಒಳ ಹರಿವನ್ನು ಪಡೆದಿದೆ. ಆದ್ದರಿಂದ ಸುಪ್ರೀಂಕೋರ್ಟ್ ಮಾರ್ಪಡಿಸಿದಂತೆ CWDT ಆದೇಶದಂತೆ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೋರಿತು.

ಎರಡೂ ರಾಜ್ಯಗಳ ವಾದವನ್ನು ಆಲಿಸಿದ ನಂತರ ಕಾವೇರಿ ನೀರು ನಿಯಂತ್ರಣ ಸಮಿತಿಯು ಜುಲೈ ಅಂತ್ಯದವರೆಗೆ ಪ್ರತಿದಿನ ಒಂದು ಟಿಎಂಸಿ ನೀರು ಬಿಡಲು ಕರ್ನಾಟಕಕ್ಕೆ ಶಿಫಾರಸು ಮಾಡಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯ ನಿರ್ಧಾರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವರಾದ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು, ''ರಾಜ್ಯದಲ್ಲಿ ಇನ್ನೂ ಉತ್ತಮ ಮಳೆ ಬಂದಿಲ್ಲ, ನೀರಿಲ್ಲ. ಜಲಾಶಯಗಳಿಗೆ ಉತ್ತಮ ನೀರು ಬಂದಿಲ್ಲ. ರಾಜ್ಯದ ಕೆರೆಗಳು, ಜಲಾಶಯಗಳು ತುಂಬುವಂತಹ ಮಳೆ ಬಂದಿಲ್ಲ.ಮಳೆಗಾಗಿ ಪ್ರಾರ್ಥಿಸೋಣ'' ಎಂದಷ್ಟೇ ಹೇಳಿದರು.

ಇದನ್ನೂ ಓದಿ :ಏನೇ ಆದೇಶ ಬಂದರೂ ನಮ್ಮ ರೈತರ ಹಿತ ಕಾಪಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

ABOUT THE AUTHOR

...view details