ಕರ್ನಾಟಕ

karnataka

ETV Bharat / state

ಕುನಾಲ್ ಹಾಡಿಗೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು: ಕುಂದಾನಗರಿಯಲ್ಲಿ ಸಂಗೀತ ರಸದೌತಣ

ಕಿತ್ತೂರು ಉತ್ಸವ ಅಧಿಕೃತವಾಗಿ ಇಂದಿನಿಂದ ಪ್ರಾರಂಭವಾಗಲಿದೆ. ಉತ್ಸವದ ನಿಮಿತ್ತ ನಿನ್ನೆ ಬೆಳಗಾವಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ.

ಖ್ಯಾತ ಹಿನ್ನೆಲೆ ಗಾಯಕ‌ ಕುನಾಲ್ ಗಾಂಜಾವಾಲಾ
ಖ್ಯಾತ ಹಿನ್ನೆಲೆ ಗಾಯಕ‌ ಕುನಾಲ್ ಗಾಂಜಾವಾಲಾ (ETV Bharat)

By ETV Bharat Karnataka Team

Published : 4 hours ago

ಬೆಳಗಾವಿ:ಅತ್ತ ವರುಣ ಶಾಂತನಾಗುತ್ತಿದ್ದಂತೆ, ಇತ್ತ ಆರಂಭಗೊಂಡ 'ಸಂಗೀತ ಸಂಜೆ' ಗಂಧರ್ವ ಲೋಕವನ್ನೇ ಅನಾವರಣಗೊಳಿಸಿತು. ಸಂಗೀತ ಮಾಂತ್ರಿಕರ ಮೋಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದು, ಸಂಭ್ರಮಿಸಿದರು.

ಹೌದು, ಬೆಳಗಾವಿಯಲ್ಲಿ ಕಿತ್ತೂರು ಉತ್ಸವ ಮುನ್ನಾ ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಳಿಸಿತು. 'ನೀನೇ ನೀನೇ ನನಗೆಲ್ಲಾ ನೀನೇ' ಎನ್ನುತ್ತಲೇ ವೇದಿಕೆಗೆ ಎಂಟ್ರಿ ಕೊಟ್ಟ ಬಾಲಿವುಡ್​ನ ಖ್ಯಾತ ಹಿನ್ನೆಲೆ ಗಾಯಕ‌ ಕುನಾಲ್ ಗಾಂಜಾವಾಲಾ ತಮ್ಮ ಸುಮಧುರ ಕಂಠದಿಂದ

ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ (ETV Bharat)
ವಿವಿಧ ಗೀತೆಗಳನ್ನು ಹಾಡುತ್ತಾ, ಸಾವಿರಾರು ಪ್ರೇಕ್ಷಕರನ್ನು ರಂಜಿಸಿದರು. ಅವರ ಅದ್ಭುತ ಗಾಯನದ ನಶೆಯಲ್ಲಿ ಇಡೀ ವೇದಿಕೆ ತೇಲಾಡಿತು.

’ನೀನೇ ನೀನೆ ನನಗೆಲ್ಲಾ ನೀನೇ’:ಆರಂಭದಲ್ಲಿ ಪುನೀತರಾಜಕುಮಾರ ಅಭಿನಯದ ಅರಸು ಸಿನಿಮಾದ ನೀನೇ ನೀನೆ ನನಗೆಲ್ಲಾ ನೀನೇ ಹಾಡು ಹಾಡಿದ ಅವರು, ಕನ್ನಡದಲ್ಲೆ ಮಾತನಾಡಿ ಪ್ರೇಕ್ಷಕರ ಮನಸೆಳೆದರು. ಬಳಿಕ ಸಲ್ಮಾನಖಾನ್ ನಟನೆಯ 'ದಿಲ್ ಕೆಹ ರಹಾ ಹೈ, ಮಿಲನ ಚಿತ್ರದ ಸಿಹಿ ಮಾತೊಂದು ಹೇಳಲೇ ಈಗ, ಮೌಲಾ ಮೌಲಾರೇ. ತಾಜ್‌ಮಹಲ್‌ ಚಿತ್ರದ 'ಖುಷಿಯಾಗಿದೆ ಏಕೋ ನಿನ್ನಿಂದಲೇ', ಮುಂಗಾರು ಮಳೆ ಚಿತ್ರದ 'ಒಂದೇ ಒಂದು ಸಾರಿ ಕಣ್ಮುಂದೆ ಬಾರೆ'ಸೇರಿ ಮತ್ತಿತರ ಹಾಡುಗಳು ಸಂಗೀತ ಪ್ರಿಯರು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ಜನರ ಶಿಳ್ಳೆ, ಕೇಕೆಗಳು ಮುಗಿಲು ಮುಟ್ಟಿದ್ದವು.

ಖ್ಯಾತ ಹಿನ್ನೆಲೆ ಗಾಯಕ‌ ಕುನಾಲ್ ಗಾಂಜಾವಾಲಾ (ETV Bharat)

ಜಿಲ್ಲೆಯ ಜನಪದ ಗಾಯಕರು ಜನಪದ ಗೀತೆ, ಭಾವಗೀತೆ, ಚಿತ್ರಗೀತೆಗಳನ್ನು ಹಾಡಿದರು. ನಂತರ ಭರತನಾಟ್ಯ ಕಲಾವಿದೆಯರು ತಮ್ಮ ನೃತ್ಯ ಪ್ರದರ್ಶಿಸಿದರು. ಇದಕ್ಕೂ ಮುನ್ನ 'ಆಕ್ಸಿಜನ್‌' ನೃತ್ಯ ತಂಡದ ಜೈ ಹೋ ಗೀತೆ ನೆರೆದಿದ್ದ ಜನರಲ್ಲಿ ದೇಶಭಕ್ತಿ ಜಾಗೃತಗೊಳಿಸಿತು.

ಕಿತ್ತೂರು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ (ETV Bharat)

ಗಮನ ಸೆಳೆದ ವರಾಹ ರೂಪಂ ನೃತ್ಯ:ಇನ್ನು ಭರತನಾಟ್ಯ, ಕೂಚುಪುಡಿ, ಯಕ್ಷಗಾನ, ಭಾಂಗಡಿ, ಗುಜರಾತಿ ಹಾಗೂ ಬಂಗಾಳಿ ಶೈಲಿಯ ನೃತ್ಯ, ಸ್ವರೂಪ್‌ ಶೆಟ್ಟಿ ಅವರು ಮಾಡಿದ 'ಕಾಂತಾರ' ಚಲನಚಿತ್ರದ 'ವರಾಹ ರೂಪಂ' ಗೀತೆಯ ಜತೆಗೆ ಬೆಂಕಿಯೊಂದಿಗಿನ ನೃತ್ಯ ಎಲ್ಲರ ಗಮನ ಸೆಳೆಯಿತು. ಯುವ ಗಾಯಕಿ ಅನನ್ಯ ಅವರ 'ಸೋಜುಗದ ಸೂಜಿ ಮಲ್ಲಿಗೆ' ಹಾಡು ಜನರನ್ನು ಮಂತ್ರಮುಗ್ದಗೊಳಿಸಿತು. ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ತಂಡವು ಕೂಡ ಭರಪೂರ ಸಂಗೀತ ರಸದೌತಣ ನೀಡಿ, ಉತ್ಸವಕ್ಕೆ ಸಾಂಸ್ಕೃತಿಕ ರಂಗು ತಂದು ಕೊಟ್ಟರು. ಸಂಗೀತ ಸಂಜೆ ಮುಗಿಯುವವರೆಗೂ ಜನ ಅತ್ತಿತ್ತ, ಕದಲದಂತೆ ಸಖತ್ ಎಂಜಾಯ್ ಮಾಡಿದರು.

ಕಿತ್ತೂರು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ (ETV Bharat)

ಕಿತ್ತೂರು ಉತ್ಸವ ಅಂಗವಾಗಿ ಇದೇ ಮೊದಲ ಬಾರಿಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ ಸೇರಿ ಮತ್ತಿತರರು ಇದ್ದರು.

ನಿನ್ನೆ ನಡೆದ ಕಿತ್ತೂರು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಣ್ಯರು. (ETV Bharat)

ಇದನ್ನೂ ಓದಿ:ಅ.23ರಿಂದ 25ರವರೆಗೆ ಅದ್ಧೂರಿ ಕಿತ್ತೂರು ಉತ್ಸವ: ಶಾಸಕ ಬಾಬಾಸಾಹೇಬ

ABOUT THE AUTHOR

...view details