ಬೆಂಗಳೂರು:ಮೈತ್ರಿ ಪಕ್ಷಗಳ ನಡುವೆ ಯಾವುದೇ ಅಸಮಧಾನ ಇಲ್ಲ, ಸಣ್ಣಪುಟ್ಟ ವಿಚಾರ ಇದ್ದರೂ ದೆಹಲಿ ಮಟ್ಟದಲ್ಲಿಯೇ ಎಲ್ಲವೂ ಪರಿಹಾರವಾಗಲಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು. ಮಾಜಿ ಸಚಿವ ಈಶ್ವರಪ್ಪ ಮನವೊಲಿಕೆ ಆಗಲಿದೆ, ಸಂಸದ ಸದಾನಂದ ಗೌಡರೂ ಕೂಡ ಪಕ್ಷದಲ್ಲಿ ಇರಲಿದ್ದಾರೆ, ಎಲ್ಲವೂ ಸುಖಾಂತ್ಯ ಕಾಣಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸೀಟು ಹಂಚಿಕೆ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಅಸಮಾಧಾನ ವಿಚಾರವನ್ನು ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ಮೈತ್ರಿ ಕುರಿತ ಮಾತುಕತೆ ನಡೆದಿರುವುದೇ ದೆಹಲಿ ಮಟ್ಟದಲ್ಲಿ, ದೆಹಲಿಯಲ್ಲಿ ಏನು ಮಾತುಕತೆ ಆಗಿದೆ ಅಂತ ನಮಗೆ ಗೊತ್ತಿಲ್ಲ. ದೆಹಲಿ ಮಟ್ಟದಲ್ಲೇ ಇದಕ್ಕೂ ಪರಿಹಾರ ಆಗಲಿದೆ, ಮೈತ್ರಿ ಬಗ್ಗೆ ಎಲ್ಲ ಜಿಲ್ಲೆಗಳಲ್ಲೂ ಕೆಳಹಂತದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಸಹಮತ ಮೂಡಿಸುವ ಅಗತ್ಯ ಇದೆ. ಜಂಟಿ ಕೋರ್ ಕಮಿಟಿ ಸಭೆ ಆಗಬೇಕು, ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಈಗಾಗಲೇ ನಾವು ಚರ್ಚೆ ಮಾಡಿದ್ದೇವೆ, ಎಲ್ಲವೂ ಸರಿಯಾಗಲಿದೆ ಎಂದರು.
ದೆಹಲಿಯಲ್ಲಿ ಇಂದು ಸಂಸದೀಯ ಮಂಡಳಿ ಸಭೆ ಇದೆ, ಎಂಟು ಕ್ಷೇತ್ರಗಳ ಅಭ್ಯರ್ಥಿ ಅಂತಿಮ ಅಗುವ ನಿರೀಕ್ಷೆ ಇದೆ. ಈಗಾಗಲೇ ಚುನಾವಣಾ ಕಾವು ಜನ ಮಾನಸದಲ್ಲಿ ಏರಿಕೆ ಆಗಿದ್ದು, ಅಲೆ ಬಿಜೆಪಿ ಪರವಾಗಿದೆ. ಶಿವಮೊಗ್ಗದಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ. ಇದನ್ನು ನೋಡಿದರೆ ಅಲೆ ಬಿಜೆಪಿ ಪರ, ಪ್ರಧಾನಿ ಮೋದಿ ಪರ ಇದೆ ಅಂತ ಗೊತ್ತಾಗುತ್ತೆ. ಕರ್ನಾಟಕ ಮಾತ್ರ ಅಲ್ಲ ತೆಲಂಗಾಣ, ತಮಿಳುನಾಡಿನಲ್ಲೂ, ಇಡೀ ದೇಶದಲ್ಲೂ ಬಿಜೆಪಿ ಪರ ಅಲೆ ಇದೆ ಎಂದರು.