ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಮತ್ತು ಹಲ್ಲೆ ಯತ್ನ ಪ್ರಕರಣ ಸಂಬಂಧ ವಿಧಾನಸಭಾ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಇಂದು ಸಿಐಡಿ ಮುಂದೆ ಹಾಜರಾಗಿ ಹೇಳಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಹಾಗೂ ಡಿ.ಎಸ್. ಅರುಣ್ ಅವರು ಸಿ.ಟಿ. ರವಿ ಅವರಿಗೆ ಜೀವ ಬೆದರಿಕೆ ಹಾಕಿರುವ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದರು. ಸಭಾಪತಿ ಅವರು ಕಾರ್ಯದರ್ಶಿ ಮೂಲಕ ಹಿರೇಬಾಗೇವಾಡಿ ಪೊಲೀಸರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿದ್ದರಿಂದ ಸಿಐಡಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಜ.6ರಂದು ಗೈರಾಗಿದ್ದ ಹಿನ್ನೆಲೆಯಲ್ಲಿ ಸಿ.ಟಿ. ರವಿ ಅವರಿಗೆ ಇಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಸಂಬಂಧ ಸಿ.ಟಿ. ರವಿ ಅವರು ತನಿಖಾಧಿಕಾರಿ ಕೇಶವಮೂರ್ತಿ ಮುಂದೆ ಹಾಜರಾಗಿ 1 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ.ರವಿ, ಚಳಿಗಾಲ ಅಧಿವೇಶನದ ಕೊನೆ ದಿನವಾಗಿದ್ದ ಡಿ.19ರಂದು ಸುವರ್ಣಸೌಧದ ಪಶ್ಚಿಮ ದ್ವಾರದ ಬಳಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಅಂದು ಸಂಜೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಜೊತೆ ಚರ್ಚೆ ನಡೆಸಿ ಪರಿಷತ್ ಕಡೆ ಬರುವ ಮೊಗಸಾಲೆ ಬಳಿ ಹಲ್ಲೆಗೆ ಯತ್ನಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ ಎಂದರು.