ಬೆಂಗಳೂರು: ತೀವ್ರ ಹೃದಯಾಘಾತದಿಂದ ಕರ್ನಾಟಕದ ಕ್ರಿಕೆಟಿಗ ಹೊಯ್ಸಳ. ಕೆ (34) ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಏಜಿಸ್ ಸೌತ್ ಝೋನ್ ಟೂರ್ನಿಯ ನಡುವೆ ದುರ್ಘಟನೆ ಸಂಭವಿಸಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಹೊಯ್ಸಳ ಸಾವನ್ನಪ್ಪಿದ್ದಾರೆ. ಇತ್ತ ಹೊಯ್ಸಳ ಪೋಷಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರಿನ ಆರ್.ಎಸ್.ಐ ಮೈದಾನದಲ್ಲಿ ನಡೆಯುತ್ತಿದ್ದ ಏಜಿಸ್ ಸೌತ್ ಝೋನ್ ಟೂರ್ನಿಯ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಹೊಯ್ಸಳ ಕಣಕ್ಕಿಳಿದಿದ್ದರು. ರೋಚಕ ಹಣಾಹಣಿಯಲ್ಲಿ ಜಯ ಗಳಿಸಿದ್ದ ಕರ್ನಾಟಕ ತಂಡದ ಆಟಗಾರರು ಭೋಜನಕ್ಕೆ ತೆರಳುವ ಮುನ್ನ ದಿಢೀರನೇ ಹೊಯ್ಸಳ ಕುಸಿದು ಬಿದ್ದಿದ್ದಾರೆ. ತಕ್ಷಣ ಪರಿಶೀಲನೆ ನಡೆಸಿದ ಮೈದಾನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಲು ಯತ್ನಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದಿದ್ದಾಗ ಕೂಡಲೇ ಅವರನ್ನ ಆಂಬ್ಯುಲೆನ್ಸ್ ಮೂಲಕ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ನಡುವೆಯೇ ಅವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದೆ.