ಕಲಬುರಗಿ: ಇಂದಿನ ಯುವಕ - ಯುವತಿಯರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶೇ.100ರಷ್ಟು ಕಠಿಣ ಪರಿಶ್ರಮ ಹಾಕಬೇಕು. ಆಗ ಮಾತ್ರ ಗೆಲುವು ಸಾಧ್ಯ ಎಂದು ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರ್ತಿ, ಕಲಬುರಗಿಯ ಶ್ರೇಯಾಂಕಾ ಪಾಟೀಲ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಆಟಗಾರ್ತಿ, ಜೀವನದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ರೂಡಿಸಿಕೊಳ್ಳಬೇಕು. ನೆವರ್ ಗಿವ್ ಅಪ್ ಆ್ಯಟಿಟ್ಯೂಡ್ ಮೂಲಕ ನೀವು ಕಂಡ ಕನಸನ್ನು ಸಾಕಾರಗೊಳಿಸಬೇಕು. ಅದಕ್ಕೆ ಶೇ.100ರಷ್ಟು ಪರಿಶ್ರಮ ಅಗತ್ಯ ಎಂದು ಸಲಹೆ ನೀಡಿದರು.
ನಾನು ಸಹ ನಿಮ್ಮ ವಯಸ್ಸಿನವಳೇ ಆಗಿದ್ದೇನೆ. ವಿರಾಟ್ ಕೊಹ್ಲಿಯಂಥ ಶ್ರೇಷ್ಠ ಆಟಗಾರರನ್ನು ಭೇಟಿ ಮಾಡಿದ ಮೇಲೆ ಮನಸ್ಥಿತಿ ಬದಲಾಗಿ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ನೀವೆಲ್ಲರೂ ನಿಮ್ಮಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿ, ನಿರಂತರ ಶ್ರಮ ಹಾಕಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ಶ್ರೇಯಾಂಕಾ ಪಾಟೀಲ್ ಕೇವಲ ಕಲಬುರಗಿ ಅಷ್ಟೇ ಅಲ್ಲದೇ, ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವರ ಕಠಿಣ ಶ್ರಮ, ಶಿಸ್ತು ಹಾಗೂ ಸಾಮರ್ಥ್ಯದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಶ್ರೇಯಾಂಕಾಗೆ ಅವರ ತಂದೆ-ತಾಯಿ ಸೇರಿದಂತೆ ಅವರ ಸಂಪೂರ್ಣ ಕುಟುಂಬದ ಬೆಂಬಲ ಅನನ್ಯ. ಅವರ ಈ ಸಾಧನೆಗೆ ಜಿಲ್ಲಾಡಳಿತದಿಂದ ಗೌರವ ಸೂಚಿಸಲಾಗುತ್ತಿದೆ ಎಂದು ತಿಳಿಸಿದರು.
ಶ್ರೇಯಾಂಕಾ ಪಾಟೀಲ್ ಅವರಿಂದ ಯುವಕ - ಯುವತಿಯರು ಸ್ಫೂರ್ತಿ ಪಡೆದು ಕೇವಲ ಕ್ರೀಡೆಯಷ್ಟೇ ಅಲ್ಲದೇ, ಪ್ರತಿಯೊಂದು ಉನ್ನತ ಹುದ್ದೆಗೆ ಕಲಬುರಗಿಯವರು ತಲುಪಬೇಕು. ಶ್ರೇಯಾಂಕಾ ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಅವರ ಶ್ರೇಯ ಮುಗಿಲೆತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.