ಬೆಂಗಳೂರು:"ನಮ್ಮಲ್ಲಿ ಹಿರಿಯ ನಾಯಕರಾಗಿದ್ದ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ನಲ್ಲಿ ಲಾಸ್ಟ್ ಬೆಂಚ್ ಆಗಲಿದ್ದಾರೆ. ಅವರನ್ನು ಅಲ್ಲಿ ಬೆಳೆಯಲು ಡಿ.ಕೆ. ಶಿವಕುಮಾರ್ ಬಿಡಲ್ಲ. ಕಾಂಗ್ರೆಸ್ ಸೇರಿ ಅವರು ತಮ್ಮ ರಾಜಕೀಯ ಭವಿಷ್ಯವನ್ನು ಹಾಳುಮಾಡಿಕೊಂಡಿದ್ದಾರೆ. ಅವರು ಪಕ್ಷ ತೊರೆದಿದ್ದರಿಂದ ಬಿಜೆಪಿಗೆ ಲಾಭವಾಗಲಿ, ನಷ್ಟವಾಗಲಿ ಯಾವುದೂ ಆಗಿಲ್ಲ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಜಾಲಹಳ್ಳಿ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಏನಾಗಿರಲಿಲ್ಲ. ಬಿಜೆಪಿಯ ಸಿದ್ಧಾಂತದಿಂದ ಬಂದವರಲ್ಲ. ಸೈಕಲ್ ಪಾರ್ಟಿ, ಪಕ್ಷೇತರ, ಬೇರೆ ಬೇರೆ ಪಕ್ಷದಿಂದ ಬಂದವರು. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಟಿಕೆಟ್ಗಾಗಿ ಪಕ್ಷದಲ್ಲಿರಲ್ಲ. ಟಿಕೆಟ್ಗಾಗಿ ಇದ್ದರೆ ನಿಷ್ಠೆಯಲ್ಲ, ಸಮಯ ಸಾಧಕ ಅಷ್ಟೆ. ಬಿಜೆಪಿಯಲ್ಲಿ ಯಾರೆಲ್ಲ ಇದ್ದಾರೋ ಅವರೆಲ್ಲರಿಗೂ ಅವಕಾಶ ಸಿಗುವ ಪ್ರಯತ್ನ ಮಾಡಿದ್ದೇವೆ. ಯೋಗೇಶ್ವರ್ಗೂ ಟಿಕೆಟ್ ಕೊಡಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಟಿಕೆಟ್ ಸಿಗಲಿಲ್ಲ ಎಂದರೆ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಯೋಗೇಶ್ವರ್ ಹೇಳಿರಲಿಲ್ಲ. ಒಂದು ವೇಳೆ ಹೋಗುತ್ತೇನೆ ಎಂದಿದ್ದರೆ ನಾವು ಪ್ರಯತ್ನವನ್ನೇ ಮಾಡುತ್ತಿರಲಿಲ್ಲ. ಆದರೂ ನಾವೂ ಕೂಡಾ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಗಂಭೀರವಾಗಿ ಮಾಡಿದ್ದೆವು. ಹೈಕಮಾಂಡ್ ಜತೆ ಚರ್ಚೆ ಮಾಡಿದ್ದೆವು. ಅವರು ಈಗ ಬೇರೆ ಹಾದಿ ತುಳಿದಿದ್ದಾರೆ" ಎಂದರು.
ಯೋಗೇಶ್ವರ್ ಈಗ ನಮ್ಮ ಮಾತು ಕೇಳದೆ ಕಾಂಗ್ರೆಸ್ ಸೇರಿದ್ದಾರೆ. ನಾವೆಲ್ಲರೂ ಇದು ಜೆಡಿಎಸ್ ಟಿಕೆಟ್, ಕುಮಾರಸ್ವಾಮಿ ಅವರೇ ತೀರ್ಮಾನ ಮಾಡಬೇಕು ಅಂತಾನೆ ಹೇಳಿಕೊಂಡು ಬಂದಿದ್ದೆವು. ಹೆಚ್ಡಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಚಿನ್ಹೆಯಡಿ ಸ್ಪರ್ಧೆಗೆ ಆಫರ್ ಕೊಟ್ಟರು. ಕಾಂಗ್ರೆಸ್ ಬದಲು ಜೆಡಿಎಸ್ನಿಂದಲೇ ನಿಲ್ಲಬಹುದಿತ್ತು. ಎನ್‌ಡಿಎಗೆ ಅನುಕೂಲ ಆಗ್ತಿತ್ತು. ಸಿಪಿವೈ ಈಗ ಪಕ್ಷ ದ್ರೋಹ ಮಾಡಿ ಹೋಗಿದ್ದಾರೆ" ಎಂದರು.
"ನಿನ್ನೆಯೇ ನಮಗೆಲ್ಲ ಯೋಗೇಶ್ವರ್ ಕಾಂಗ್ರೆಸ್ ಸೇರ್ತಾರೆ ಎನ್ನುವ ಸುಳಿವಿತ್ತು. ಇದರ ಬಗ್ಗೆ ಪ್ರಲ್ಹಾದ್ ಜೋಶಿಗೆ ಕುಮಾರಸ್ವಾಮಿ ಹೇಳಿ, ನಿನ್ನೆಯೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೆವು. ಯೋಗೇಶ್ವರ್ ಕಾಂಗ್ರೆಸ್ನಲ್ಲಿ ಒಬ್ಬ ಲೀಡರ್ ಆಗಿ ಬೆಳೆಯಲು ಆಗಲ್ಲ. ಅವರು ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ನಾವೇ ಗೆಲ್ಲುತ್ತೇವೆ" ಎಂದರು.
"ನಿನ್ನೆ ಕುಮಾರಸ್ವಾಮಿ ಅಭ್ಯರ್ಥಿ ಹೆಸರು ಘೋಷಣೆ ಮಾಡದಿರುವ ಹಿಂದೆ ಇದೇ ಕಾರಣ ಇದ್ದಿರಬೇಕು. ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಇದ್ದರು ಎಂದು ಕುಮಾರಸ್ವಾಮಿ ಅವರಿಗೆ ಗೊತ್ತಿತ್ತು. ಟಿಕೆಟ್ ಕೊಟ್ಟಿದ್ದಿದ್ದರೆ ನಮಗೂ ಕಷ್ಟ ಅಂತ ಅವರು ಹೇಳಿದ್ರು, ಹಾಗಾಗಿ ನಿನ್ನೆ ಘೋಷಣೆ ಮಾಡಿಲ್ಲವೇನೋ? ಈಗ ಜೆಡಿಎಸ್ನವರು ಯಾರಿಗೆ ಟಿಕೆಟ್ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸುತ್ತೇವೆ" ಎಂದರು.
"ಯೋಗೇಶ್ವರ್ ಚನ್ನಪಟ್ಟಣಕ್ಕೆ ಮಾತ್ರ ಸೀಮಿತ. ನಮ್ಮಲ್ಲಿ ಇನ್ನೂ ಪ್ರಬಲ ಒಕ್ಕಲಿಗ ನಾಯಕರಿದ್ದಾರೆ. ಇವರ ಸೇರ್ಪಡೆ ಹಳೇ ಮೈಸೂರು ಭಾಗದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಶೆಟ್ಟರ್ ಹೀಗೇ ಕಾಂಗ್ರೆಸ್ ಅಂತ ಹೋದ್ರು, ವಾಪಸ್ ಬಂದ್ರು. ಈಗ ಸಿಪಿವೈ ಹೋಗಿದ್ದಾರೆ, ಮುಂದೇನಾಗುತ್ತೆ ನೀವೇ ನೋಡ್ತಿರಿ" ಎಂದು ಟಾಂಗ್ ನೀಡಿದರು.
"ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಜನ ಬಿಟ್ಟರು. ಆದರೂ ಲೋಕಸಭೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಯಾರು ಬರಲಿ ಹೋಗಲಿ ಬಿಜೆಪಿ ಕೇಡರ್ ಬೇಸ್ ಪಕ್ಷ. ನಮ್ಮ ಪಕ್ಷದ ಕಾರ್ಯಕರ್ತರೇ ಬಹಳ ಜನರಿದ್ದಾರೆ. ಮೊದಲು ಹಳೆಯ ಕಾರ್ಯಕರ್ತರು, ನಂತರ ಬಂದವರಿಗೂ ಗೌರವ ಕೊಡುತ್ತಾ ಬಂದಿದ್ದೇವೆ. ಚನ್ನಪಟ್ಟಣದಲ್ಲಿ ಮೊದಲಿನಿಂದಲೂ ನಾವು ಸೋತಿದ್ದೇವೆ, ನಮಗೆ ದೊಡ್ಡ ಹೊಡೆತವಲ್ಲ. ಜೆಡಿಎಸ್ನಿಂದ ಪ್ರಬಲ ಅಭ್ಯರ್ಥಿಯನ್ನು ಹಾಕಲು ಮಾತನಾಡುತ್ತೇನೆ" ಎಂದರು.
"ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿದಾಗ ಒಬ್ಬರಿಂದ ಬಿಜೆಪಿ ಸರ್ಕಾರ ಬರಲಿಲ್ಲ. ಆಗ ಯಾರ್ಯಾರು ಬಿಜೆಪಿಗೆ ಬಂದ್ರು, ಯಾರು ಕರೆತಂದ್ರು ಅಂತ ಜಗತ್ತಿಗೇ ಗೊತ್ತು. ನಾನೂ ಅವರನ್ನು ಕರೆತಂದೆ, ಯಡಿಯೂರಪ್ಪ, ವಿಜಯೇಂದ್ರ ಸಹ ಕರೆತಂದಿದ್ದಾರೆ. ಯೋಗೇಶ್ವರ್ ಒಬ್ಬರೇ ಕಾರಣರಲ್ಲ, ಯಾರೋ ಒಬ್ಬರಿಂದ ಸರ್ಕಾರ ರಚನೆಯಾಗಲು ಸಾಧ್ಯವಿಲ್ಲ. ಅದೆಲ್ಲಾ ಮುಗಿದುಹೋದ ಅಧ್ಯಾಯ. ಈಗ ಹೊಸ ಅಧ್ಯಾಯಕ್ಕೆ ಹೋಗಿದ್ದಾರೆ. ಅವರಿಗೆ ಭ್ರಮನಿರಸವನವಾಗಲಿದೆ" ಎಂದರು.
ಸಿಪಿವೈ ವಿರುದ್ಧ ಹೆಚ್. ವಿಶ್ವನಾಥ್ ವಾಗ್ದಾಳಿ:""ಸೈನಿಕ ಕುಲಕ್ಕೆ ಯೋಗೇಶ್ವರ್ ಅಪಮಾನ ಮಾಡುತ್ತಿದ್ದಾರೆ. ಆತನನ್ನು ಸೈನಿಕ ಅನಬಾರದು ಕಾಂಗ್ರೆಸ್ಗೆ ಯೋಗೇಶ್ವರ್ ಅನಿವಾರ್ಯತೆ ಇಲ್ಲ. ಕಾಂಗ್ರೆಸ್ ಅನ್ನು ಸಿಎಂ ಹಾಳು ಮಾಡುತ್ತಿದ್ದಾರೆ. ನಾನು ಹಿಂದೆ ಹುಣಸೂರು ಚುನಾವಣೆಗೆ ನಿಂತಿದ್ದೆ. ಆಗ ಸಿಎಂ ಆಗಿದ್ದ ಯಡಿಯೂರಪ್ಪ ಹುಣಸೂರು ಚುನಾವಣೆಗೆ ಬೇಕಾದ ಸಾಮಗ್ರಿಗಳನ್ನು ಇವನ ಕೈಯಲ್ಲಿ ಕೊಟ್ಟು ಕಳುಹಿಸಿದ್ದರು. ಈತ ಹುಣಸೂರಿಗೆ ಬರಲೇ ಇಲ್ಲ. ಇಂತಹ ವಂಚಕನನ್ನು ಕಾಂಗ್ರೆಸ್ಗೆ ಏಕೆ ಕರಿಸಿಕೊಂಡರು? ಚನ್ನಪಟ್ಟಣ ಉಪಚುಣಾವಣೆ ಸರಕಾರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಕಾಂಗ್ರೆಸ್ಗೆ ಈಗಾಗಲೇ 136 ಸ್ಥಾನಗಳು ಇವೆ. ಇತಂಹ ಸಂದರ್ಭದಲ್ಲಿ ಹರಸಹಾಸಪಟ್ಟು ಸಿ.ಪಿ.ಯೋಗೇಶ್ವರ್ ಅನ್ನು ಕಾಂಗ್ರೆಸ್ಗೆ ಏಕೆ ಕರೆತಂದರು?" ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸಿ.ಪಿ ಯೋಗೇಶ್ವರ್ ವಿರುದ್ಧ ವಾಗ್ದಳಿ ನಡೆಸಿದರು.
ಇಂದು ಮೈಸೂರಿನ ಜಲದರ್ಶಿನಿ ಅಥಿತಿ ಗೃಹದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.