ಕರ್ನಾಟಕ

karnataka

ETV Bharat / state

ಅಪ್ರಾಪ್ತರಿಗೆ ವಾಹನ ಚಾಲನೆಗೆ ಕೊಡುವಾಗ ಎಚ್ಚರ!: ಬಾಲಕನ ತಂದೆಗೆ ಕೋರ್ಟ್​ ದಂಡ - Minor Bike Riding Case

ಅಪ್ರಾಪ್ತರು ಯಾವುದೇ ವಾಹನ ಚಾಲನೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಆದರೂ ಕೂಡ ಬಾಲಕರು ಬೈಕ್​, ಇತರ ವಾಹನಗಳನ್ನು ಚಲಾಯಿಸುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಹೀಗೆ ಬೈಕ್​ ಚಾಲನೆ ಮಾಡಿದ ಅಪ್ರಾಪ್ತನ ತಂದೆಗೆ ಕೋರ್ಟ್​ ದಂಡದ ಬಿಸಿ ಮುಟ್ಟಿಸಿದೆ.

court
ದಾವಣಗೆರೆ ನ್ಯಾಯಾಲಯ (ETV Bharat)

By ETV Bharat Karnataka Team

Published : Aug 30, 2024, 10:59 AM IST

ದಾವಣಗೆರೆ: ನಗರದಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸಂಚಾರ ಪೊಲೀಸರು ಜಾಗೃತಿ ಮೂಡಿಸಿದರೂ ಕೂಡ ಬಾಲಕರು ವಾಹನ ಚಲಾಯಿಸುವುದಕ್ಕೆ ಸಂಪೂರ್ಣ ಕಡಿವಾಣ ಬೀಳುತ್ತಿಲ್ಲ. ಇದೀಗ ಪ್ರಕರಣವೊಂದರಲ್ಲಿ, ಅಪ್ರಾಪ್ತ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ತಂದೆಗೆ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

ದಾವಣಗೆರೆ ಎಸ್​​ಪಿ ಉಮಾ ಪ್ರಶಾಂತ್ ಸೂಚನೆ ಮೇರೆಗೆ ನಗರ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡನಿ ಮಾರ್ಗದರ್ಶನದಲ್ಲಿ ಇತ್ತೀಚೆಗೆ ವಿಶೇಷ ಕಾರ್ಯಾಚರಣೆ ನಡೆದಿತ್ತು. ದಕ್ಷಿಣ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪಿಎಸ್‌ಐ ನಿರ್ಮಲಾ ಡಿ.ಹೆಚ್. ನೇತೃತ್ವದಲ್ಲಿ ವಾಹನ ತಪಾಸಣೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ವೇಳೆ, ನೂತನ್ ಕಾಲೇಜು ರಸ್ತೆಯಲ್ಲಿ ಬಾಲಕನೋರ್ವ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದುದನ್ನು ತಡೆದು ಪೊಲೀಸರು ಪರಿಶೀಲಿಸಿದ್ದಾರೆ‌. ಆಗ ಆತ ಅಪ್ರಾಪ್ತನೆಂದು ತಿಳಿದು ಬಂದಿತ್ತು. ಅಪ್ರಾಪ್ತನಿಗೆ ಸಾರ್ವಜನಿಕ ರಸ್ತೆ ಮೇಲೆ ಚಲಾಯಿಸಲು ದ್ವಿಚಕ್ರ ವಾಹನ ನೀಡಿದ್ದರಿಂದ ಬೈಕ್ ಜಪ್ತಿ ಮಾಡಲಾಗಿತ್ತು. ಈ ಬಗ್ಗೆ ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿ ಪ್ರಕರಣ ದಾಖಲಾಗಿತ್ತು.

ಬಳಿಕ ದಾವಣಗೆರೆ ಸಿಜೆಎಂ ಕೋರ್ಟ್​ನ ಪಿಆರ್​​ಎಲ್ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯಕ್ಕೆ ಬೈಕ್ ಮಾಲೀಕರಾದ ಗೋರೂರು ಬಾಲಕೃಷ್ಣ ವಿರುದ್ಧ ಪೊಲೀಸರು ದೋಷಾರೋಪಣೆ ಸಲ್ಲಿಸಿದ್ದರು. ನ್ಯಾಯಾಲಯವು ಆರೋಪಿತ ಬೈಕ್ ಮಾಲೀಕನಿಗೆ 25,000 ರೂ. ದಂಡ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಪ್ರಾಪ್ತ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರು ಹಾಗೂ ವಾಹನದ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ. ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಸ್​​ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಇದನ್ನೂ ಓದಿ:ಜಾತಿ ನಿಂದನೆ ಆರೋಪ ಪ್ರಕರಣ: ವಕೀಲ ಕೆ.ಎನ್.ಜಗದೀಶ್ ಬಂಧನ - Lawyer K N Jagadish Arrest

ABOUT THE AUTHOR

...view details