ಕರ್ನಾಟಕ

karnataka

ETV Bharat / state

ಲಂಚ ಪಡೆದು ಬಿಟಿಸಿ ಸ್ಟೀವರ್ಡ್‌ ನೇಮಕ ಆರೋಪ: ಬಿ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ - Siddaramaiah

ಸಿಎಂ ಸಿದ್ದರಾಮಯ್ಯ ಅವರು ಲಂಚ ಪಡೆದು ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ ಸ್ಟೀವರ್ಡ್ ನೇಮಕ ಮಾಡಿದ್ದಾರೆಂಬ ಆರೋಪ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್‌ನ್ನು ಕೋರ್ಟ್​ ತಿರಸ್ಕರಿಸಿದೆ.

Court rejects B report on BTCL steward appointment case
ಲಂಚ ಪಡೆದು ಬಿಟಿಸಿ ಸ್ಟೀವರ್ಡ್‌ ನೇಮಕ ಆರೋಪ

By ETV Bharat Karnataka Team

Published : Feb 24, 2024, 6:56 AM IST

ಬೆಂಗಳೂರು :ಮೈಸೂರಿನ ವಿವೇಕ್ ಹೋಟೆಲ್ ವ್ಯವಸ್ಥಾಪಕ ನಿರ್ದೇಶಕ ಎಲ್ ವಿವೇಕಾನಂದ ಅವರಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದು ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ (ಬಿಟಿಸಿಎಲ್) ಸ್ಟೀವರ್ಡ್ ಆಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್‌ನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಲೋಕಾಯುಕ್ತ ಪೊಲೀಸರ ಅಂತಿಮ ವರದಿಗೆ ಆಕ್ಷೇಪಿಸಿ, ದೂರುದಾರ ಬೆಂಗಳೂರಿನ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಸಲ್ಲಿಸಿದ್ದ ಪ್ರತಿಭಟನಾ ಅರ್ಜಿ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಈ ಆದೇಶ ಮಾಡಿದ್ದಾರೆ.

ತನಿಖಾಧಿಕಾರಿ ಸಲ್ಲಿಸಿರುವ ಬಿ ರಿಪೋರ್ಟ್ ತಿರಸ್ಕರಿಸಲಾಗಿದ್ದು, ಕಾನೂನಿನ ಅನ್ವಯ ತನಿಖಾಧಿಕಾರಿ ಹೆಚ್ಚಿನ ತನಿಖೆ ನಡೆಸಿ ಹೊಸದಾಗಿ ಆರು ತಿಂಗಳ ಒಳಗಾಗಿ ತನಿಖೆ ನಡೆಸಿ, ಅಂತಿಮ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ ಮನೆ ನಿರ್ಮಿಸಲು ನಿವೇಶನ ಖರೀದಿಸಲು 1,30,00,000 ರೂಪಾಯಿ ಪಡೆದ ಬಳಿಕ ವಿವೇಕಾನಂದ ಅವರನ್ನು ಬಿಟಿಸಿಎಲ್ ಸ್ಟೀವರ್ಡ್ ಆಗಿ ನಾಮ ನಿರ್ದೇಶನ ಮಾಡಲಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆದಿದೆಯೇ ಎಂಬುದನ್ನು ಪರಿಶೀಲಿಸದೇ ತನಿಖಾ ಸಂಸ್ಥೆ ಅಂತಿಮ ವರದಿ ಸಲ್ಲಿಸಿದೆ. ಇದು ಕಾನೂನಿನ ದೃಷ್ಟಿಯಲ್ಲಿ ಸರಿಯಲ್ಲ. ಪ್ರಾಥಮಿಕ ತನಿಖೆ ಆಧರಿಸಿ ಮುಕ್ತಾಯ ವರದಿಯನ್ನು ತನಿಖಾಧಿಕಾರಿ ಸಲ್ಲಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನ್ಯಾಯದಾನ ಮಾಡಿದರೆ ಸಾಲದು. ಅದು ಕಾಣುವಂತೆ ನ್ಯಾಯದಾನ ಮಾಡಬೇಕು ಎಂದು ಹಲವು ಆದೇಶಗಳಲ್ಲಿ ಹೇಳಲಾಗಿದೆ. ಅಂತೆಯೇ, ತನಿಖೆಯು ನ್ಯಾಯಯುತವಾಗಿ ಮಾತ್ರವಲ್ಲ, ಅದನ್ನು ನ್ಯಾಯಯುತ ವಿಧಾನದ ಮೂಲಕ ನಡೆಸಬೇಕು. ತನಿಖಾ ಸಂಸ್ಥೆಯು ದೂರುದಾರರಿಗೆ ಅಗತ್ಯ ಅವಕಾಶ ನೀಡುವ ಮೂಲಕ ನ್ಯಾಯಯುತವಾಗಿ ತನಿಖೆ ನಡೆಸಿ ಮುಕ್ತಾಯ ವರದಿ ಸಲ್ಲಿಸಿಲ್ಲ ಎಂಬುದು ಸುಸ್ಪಷ್ಟವಾಗಿದೆ. ಹೀಗಾಗಿ, ಅಂತಿಮ ವರದಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:2014ರ ಜುಲೈ 28ರಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ 1,30,00,000 ರೂಪಾಯಿಗಳನ್ನು ಚೆಕ್ ಮೂಲಕ ಸ್ವೀಕರಿಸಿರುವುದು ಅವರೇ ಲೋಕಾಯುಕ್ತಕ್ಕೆ ಸಲ್ಲಿಸಿರುವ ಫಾರ್ಮ್ 4ರಲ್ಲಿ ಸ್ಪಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ವಿವೇಕಾನಂದ ಅವರನ್ನು ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್​​​ನ (ಬಿಟಿಸಿಎಲ್) ಸ್ಟೀವರ್ಡ್ ಆಗಿ ನಾಮ ನಿರ್ದೇಶನ ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು.

ಹಣ ಪಡೆದು ವಿವೇಕಾನಂದ ಅವರನ್ನು ಬಿಟಿಸಿಎಲ್ ಸ್ಟೀವರ್ಡ್ ಮತ್ತು ನಿರ್ವಹಣಾ ಸಂಸ್ಥೆಯ ಸದಸ್ಯರನ್ನಾಗಿ ಸಿದ್ದರಾಮಯ್ಯ ನೇಮಕ ಮಾಡಲಾಗಿದೆ. ಹಣಕಾಸಿನ ಲಾಭ ಮಾಡಿಕೊಂಡು ಸಿದ್ದರಾಮಯ್ಯ ಅವರು ವಿವೇಕಾನಂದಾವರಿಗೆ ಲಾಭದಾಯಕ ಹುದ್ದೆ ಕಲ್ಪಿಸಿದ್ದಾರೆ. ಇದಕ್ಕೆ ನಿರ್ಬಂಧವಿದ್ದು, ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆ, ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ತನಿಖೆ ನಡೆಸಬೇಕು ಎಂದು ಎನ್.ಆರ್. ರಮೇಶ್ ಖಾಸಗಿ ದೂರು ದಾಖಲಿಸಿದ್ದರು.

ಇದನ್ನೂ ಓದಿ:ಸೋನಿಯಾ, ರಾಹುಲ್​ ಗಾಂಧಿ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ: ನಲಪಾಡ್​ ವಿರುದ್ಧದ ಪ್ರಕರಣ ರದ್ದು ಪಡಿಸಿದ ಹೈಕೋರ್ಟ್

ABOUT THE AUTHOR

...view details