ಬೆಂಗಳೂರು:ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಿವಿಧ ಹುದ್ದೆಗಳಿಗೆ ದರ ನಿಗದಿಪಡಿಸಿದೆ ಎಂದು ಆರೋಪಿಸಿ ಜಾಹೀರಾತು ನೀಡಿದ್ದ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದ್ದರೂ, ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್ ಜಾರಿ ಮಾಡಬೇಕು ಎಂದು ಬಿಜೆಪಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಪ್ರಕರಣದ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (42ನೇ ಸೆಷನ್ಸ್ ನ್ಯಾಯಾಲಯ) ನ್ಯಾಯಾಧೀಶರಾದ ಕೆ.ಎನ್.ಶಿವಕುಮಾರ್ ಅವರ ಮುಂದೆ ಬಿಜೆಪಿ ಪರ ವಕೀಲರು ಮನವಿ ಮಾಡಿದರು. ''ನಾಲ್ಕನೇ ಆರೋಪಿ ರಾಹುಲ್ ಗಾಂಧಿಗೆ ಈಗಾಗಲೇ ಸಮನ್ಸ್ ಜಾರಿಯಾಗಿದರೂ ಅವರು ಖುದ್ದು ಹಾಜರಾಗಿಲ್ಲ. ಮುಂದೆ ಈ ರೀತಿಯ ಆಗಬಾರದು ಆದ ಕಾರಣ ಜಾಮೀನು ರಹಿತ ವಾರಂಟ್ ಜಾರಿ ಮಾಡಬೇಕು'' ಎಂದು ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ಕೋರಿದರು.
''ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು, ಹೀಗಿದ್ದಾಗ ಏಕೆ ವಿನಾಯಿತಿ ನೀಡಬೇಕು. ಕಳೆದ ಚುನಾವಣೆಯಲ್ಲಿ ಪ್ರಜಾಪ್ರತಿನಿಧಿ ಕಾಯಿದೆ ಉಲ್ಲಂಘಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡಲಾಗಿದೆ. ಹೀಗಾಗಿ, ಇವರಿಗೆ ವಿನಾಯಿತಿ ನೀಡುವುದು ಸರಿಯಲ್ಲ. ಕೋರ್ಟ್ ಸಮನ್ಸ್ ನೀಡಿದಾಗ ಖುದ್ದು ಹಾಜರಾಗಬೇಕು. ಆದರೆ ಇವರು ಹಾಜರಾಗದಿರುವುದು ಸರಿಯಲ್ಲ'' ಎಂದರು.
''ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿಯೇ ಕೋರ್ಟ್ಗೆ ಬಂದಿಲ್ಲ. ಮೊದಲ ಸಮನ್ಸ್ಗೆ ಸಿಆರ್ಪಿಸಿ 205 ಅಡಿ ಮನವಿ ಮಾಡಿದ್ದರು. ಆದರೆ ಈಗ ಮತ್ತೆ ವಿಚಾರಣೆಗೆ ಬಾರದಿರುವುದು ಸರಿಯಲ್ಲ. ಈಗ ಚುನಾವಣೆ ನಡೆಯುತ್ತಿದೆ. ಅವರು ಓರ್ವ ಆಭ್ಯರ್ಥಿ ಸಹ ಆಗಿದ್ದಾರೆ. ಮ್ಯಾಜಿಸ್ಟ್ರೇಟ್ ಸಮನ್ಸ್ ಜಾರಿ ಮಾಡಿದಾಗ ಹಾಜರಾಗಬೇಕು. ಅದನ್ನು ಹೊರತುಪಡಿಸಿ ಬಾಂಬೆ ಮೀಟಿಂಗ್, ಕೋಲ್ಕತ್ತಾ ಮಿಟಿಂಗ್ ಅಂತಾ ಟೈಂ ತಗೊಂಡರೆ ಹೇಗೆ? ಕೋರ್ಟ್ಗೆ ಹಾಜರಾಗಿ ವಿನಾಯಿತಿ ಪಡೆಯಬೇಕಿತ್ತು. ಸಮನ್ಸ್ ಇದ್ದರೂ ಹಾಜರಾಗದೇ ಇರುವುದು ಉದ್ದೇಶಪೂರ್ವಕ'' ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಪರ ವಕೀಲರು, ''ನಮ್ಮ ಕಕ್ಷಿದಾರರು ಇಂಡಿಯಾ ಕೂಟದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದೇ ಕಾರಣದಿಂದ ಹಾಜರಾಗಿಲ್ಲ, ಸಿಆರ್ಪಿಸಿ ಸೆಕ್ಷನ್ 205ರಲ್ಲಿ ಇದಕ್ಕೆ ಅವಕಾಶವಿದೆ. ಅಲ್ಲದೆ, ಇದು ಖಾಸಗಿ ದೂರಾಗಿದೆ. ಆದ್ದರಿಂದ ಖುದ್ದು ಹಾಜರಿಗೆ ವಿನಾಯ್ತಿ ನೀಡಬೇಕು'' ಎಂದು ಕೋರಿದರು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಬೇಕು ಎಂದು ಕಾಂಗ್ರೆಸ್ ಪರ ವಕೀಲರು ಮನವಿ ಮಾಡಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮಧ್ಯಾಹ್ನ 3 ಗಂಟೆಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದರು.
ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ:ಮಾನ ಹಾನಿಕಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಜರಾದ ಹಿನ್ನೆಲೆಯಲ್ಲಿ ನಗರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಅಲ್ಲದೆ, ಇಬ್ಬರು ಡಿಸಿಪಿ ಮತ್ತು 50ಕ್ಕೂ ಹೆಚ್ಚು ಪೊಲೀಸರು ಭದ್ರತಾ ಕಾರ್ಯದಲ್ಲಿ ತೊಡಗಿದ್ದರು. ಇಬ್ಬರೂ ನಾಯಕರು ನ್ಯಾಯಾಲಯದ ಆವರಣ ಪ್ರವೇಶಿಸುತ್ತಿದ್ದಂತೆ ನೂರಾರು ವಕೀಲರು ಇಬ್ಬರೂ ನಾಯಕರಿಗೆ ಸುತ್ತುವರೆದಿದ್ದರು.
ಇದನ್ನೂ ಓದಿ:ಮಾನಹಾನಿ ಪ್ರಕರಣ: ಸಿಎಂ, ಡಿಸಿಎಂಗೆ ಜಾಮೀನು; ರಾಹುಲ್ ಗಾಂಧಿ ವಿನಾಯ್ತಿ ಬಗ್ಗೆ ಮಧ್ಯಾಹ್ನ ತೀರ್ಪು - Court Bail to CM and DCM