ಬೆಳಗಾವಿ: ಹೆಸ್ಕಾಂ ಅಧಿಕಾರಿ ವಿರುದ್ಧದ ಸುಳ್ಳು ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆ ನಡೆಸಿ ಮಂಗಳವಾರ ಎಲ್ಲಾ 13 ಜನರನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದ ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಅಪರಾಧಿಗಳಿಗೆ 3 ವರ್ಷ 6 ತಿಂಗಳು ಜೈಲು ಹಾಗೂ ತಲಾ 86 ಸಾವಿರ ರೂ. ದಂಡ ವಿಧಿಸಿ, ಮಹತ್ವದ ತೀರ್ಪು ನೀಡಿದೆ.
ಹೆಸ್ಕಾಂನ ಬೆಳಗಾವಿ ವಿಭಾಗದ ಅಧೀಕ್ಷಕ ಇಂಜಿನಿಯರ್ ತುಕಾರಾಮ ಮಜ್ಜಗಿ ಅವರು ಹೆಸ್ಕಾಂನ ಸಹಾಯಕ ಇಂಜನಿಯರ್ ಬಿ.ವಿ. ಸಿಂಧು ಅವರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸದ್ಯ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ವಿ. ಸಿಂಧು ಸೇರಿದಂತೆ ಸಹಾಯಕ ಮಾರ್ಗದಾಳು ನಾಥಾಜಿ ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಜಿತ್ ಪೂಜಾರಿ, ಸಹಾಯಕ ಮಾರ್ಗದಾಳು ಮಲ್ಲಸರ್ಜ ಶಹಪೂರಕರ, ಕಿರಿಯ ಇಂಜಿನಿಯರ್ ಸುಭಾಷ್ ಹಲ್ಲೊಳ್ಳಿ, ಮಾರ್ಗದಾಳು ಈರಪ್ಪ ಪತ್ತಾರ, ಮೇಲ್ವಿಚಾರಕ ಮಲ್ಲಿಕಾರ್ಜುನ ರೇಡಿಹಾಳ, ಹಿರಿಯ ಸಹಾಯಕ ಭೀಮಪ್ಪ ಗೋಡಲಕುಂದರಗಿ, ಸ್ಟೇಷನ್ ಅಟೆಂಡರ್ ಗ್ರೇಡ್-2 ರಾಜೇಂದ್ರ ಹಳಿಂಗಳಿ, ಲೆಕ್ಕಾಧಿಕಾರಿ ಸುರೇಶ ಕಾಂಬಳೆ, ಲೈನ್ಮ್ಯಾನ್ಗಳಾದ ಈರಯ್ಯ ಹಿರೇಮಠ, ಮಾರುತಿ ಪಾಟೀಲ್ ಹಾಗೂ ನಿವೃತ್ತ ಸಹಾಯಕಿ ದಾಕ್ಷಾಯಣಿ ನೇಸರಗಿ ಅವರು ಸುಳ್ಳು ಪ್ರಕರಣ ದಾಲಿಸಿದ್ದರು.
ಈ ಕುರಿತು ಆರೋಪ ಸಾಬೀತಾಗಿರುವ ಹಿನ್ನೆಲೆ ಎಲ್ಲಾ 13 ಜನರು ದೋಷಿಗಳು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಲ್. ವಿಜಯಲಕ್ಷ್ಮೀದೇವಿ ಮಂಗಳವಾರ ಮಹತ್ವದ ತೀರ್ಪು ನೀಡಿದ್ದರು.