ಕರ್ನಾಟಕ

karnataka

ETV Bharat / state

ರೇಣುಕಾಸ್ವಾಮಿ ಹತ್ಯೆ ಕೇಸ್: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ - Darshan Bail Plea Hearing

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ನಾಳೆಗೆ ಮುಂದೂಡಿದೆ.

By ETV Bharat Karnataka Team

Published : 4 hours ago

actor-darshan
ನಟ ದರ್ಶನ್ (ETV Bharat)

ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ನಾಳೆಗೆ ಮುಂದೂಡಿತು. ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯೂ ನಾಳೆ ನಡೆಯಲಿದೆ.

ವಾದ ಮಂಡಿಸಲು ಕಾಲಾವಕಾಶ ಪಡೆದಿದ್ದ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಇಂದು 57ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಪ್ರಬಲ ವಾದ ಮಂಡಿಸಿದರು.

ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆಯನ್ನು ಅತ್ಯುತ್ತಮ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ನನ್ನ ಪ್ರಕಾರ ಕಳಪೆ ತನಿಖೆಯಾಗಿದೆ. ದರ್ಶನ್ ವಿರುದ್ಧ ಎಫ್ಐಆರ್ ದಾಖಲಾದಾಗಿನಿಂದಲೂ ಮಾಧ್ಯಮಗಳು ಟ್ರಯಲ್ ನಡೆಸಿ ದೋಷಿ ಎಂದು ತೀರ್ಪು ನೀಡಿವೆ. ಮಾಧ್ಯಮಗಳ ಟ್ರಯಲ್​ನಿಂದ ಜಾಮೀನು ನಿರ್ಧಾರವಾಗಲ್ಲ ಎಂದು ನಂಬಿದ್ದೇನೆ. ದರ್ಶನ್ ವಿರುದ್ಧ ಸಾಂದರ್ಭಿಕ ಸಾಕ್ಷಿ ಸೃಷ್ಟಿಸಲಾಗಿದೆ. ಹತ್ಯೆ ಸ್ಥಳದಲ್ಲಿ ನೈಲಾನ್ ಹಗ್ಗ, ಮರದ ಕೊಂಬೆ, ಸ್ಟೋನಿ ಬ್ರೂಕ್ ಪಬ್ ಹೆಸರಿನ ನೀರಿನ ಬಾಟಲಿ ಮಹಜರು ಮಾಡಿರುವುದಾಗಿ ಪೊಲೀಸರು ಚಾರ್ಜ್‌ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಅವರು ವಾದಿಸಿದರು.

ವಾದ ಮುಂದುವರೆಸಿ, ಮೃತ ರೇಣುಕಾಸ್ವಾಮಿ ಬಾಯಿಯನ್ನು ನಾಯಿಗಳು ತಿಂದಿವೆ ಎಂದು ವರದಿ ನೀಡಲಾಗಿದೆ. ಅಲ್ಲದೆ ಮಾಧ್ಯಮಗಳಲ್ಲಿ ಚಾರ್ಜ್‌ಶೀಟ್​ನಲ್ಲಿ ಉಲ್ಲೇಖಿಸಿರುವ ಎಲ್ಲ ಅಂಶಗಳು ಬಹಿರಂಗವಾಗಿವೆ. ನ್ಯಾಯಾಲಯಕ್ಕೆ ಬರುವ ಮುನ್ನ ಮಾಧ್ಯಮಗಳಲ್ಲಿ ಚಾರ್ಜ್‌ಶೀಟ್​ನಲ್ಲಿನ ಅಂಶಗಳು ಸೋರಿಕೆಯಾಗಿವೆ. ಹೀಗಾಗಿ ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕೆಂದು ಸಿ.ವಿ.ನಾಗೇಶ್ ಮನವಿ ಮಾಡಿದರು.

ಹತ್ಯೆ ಸ್ಥಳದಲ್ಲಿ ಸಿಕ್ಕ ಎಲ್ಲ ವಸ್ತುಗಳನ್ನು ಸಾಕ್ಷಿಯಾಗಿ ಜೂ.12ರಂದೇ ವಶಕ್ಕೆ ಪಡೆದುಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ. ಆದರೆ, ವಾಸ್ತವದಲ್ಲಿ ಜೂ.9ರಂದೇ ಇವೆಲ್ಲ ವಸ್ತುಗಳು ಪೊಲೀಸರ ಬಳಿ ಇದ್ದವು ಎಂದರು. ನಂತರ ಪಂಚನಾಮೆ ವರದಿ ಉಲ್ಲೇಖಿಸಿ, ಟಾರ್ಚ್ ಬೆಳಕಿನಲ್ಲಿ ಪಂಚನಾಮೆ ಮಾಡಲಾಗಿದೆ ಎಂದು ನಮೂದಿಸಿದ್ದು, ಸಾಕ್ಷಿಗಳನ್ನು ನಂಬುವಂತಿಲ್ಲ ಎಂದರು.

ರೇಣುಕಾಸ್ವಾಮಿ ಹತ್ಯೆ ಸ್ಥಳವನ್ನು ತೋರಿಸುವುದಾಗಿ ದರ್ಶನ್ ಹೇಳಿದರೂ ಪೊಲೀಸರು ಸ್ವಇಚ್ಛಾ ಹೇಳಿಕೆ ಪಡೆದ ಮಾರನೇ ದಿನ ಪಟ್ಟಣಗೆರೆ ಶೆಡ್​ಗೆ ಕರೆದೊಯ್ದಿದ್ದಾರೆ. ಸ್ವಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಹಾಕಿಕೊಂಡಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ರಿಕವರಿ ವೇಳೆ ಪೊಲೀಸರು ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ದರ್ಶನ್ ಶೂ ರಿಕವರಿ ಮಾಡಿಕೊಂಡಿದ್ದಾರೆ. ಹತ್ಯೆ ದಿನ ತಾನು ಧರಿಸಿದ ಬಟ್ಟೆ ತೋರಿಸುವುದಾಗಿ ಹೇಳಿದ್ದಾರೆಯೇ ಹೊರತು, ಯಾವ ಬಟ್ಟೆ ಎಂದು ಪೊಲೀಸರು ನಮೂದಿಸಿಲ್ಲ. ತಾವೇ ತೆರಳಿ ಟೀ ಶರ್ಟ್, ಜೀನ್ಸ್ ಹಾಗೂ ಶೂ ರಿಕವರಿ ಮಾಡಿದ್ದಾರೆ ಎಂದು ಪ್ರಬಲವಾಗಿ ವಾದ ಮಂಡಿಸಿದರು.

ಬಟ್ಟೆ ತೊಳೆದ ಮೇಲೂ ರಕ್ತದ ಕಲೆ ಉಳಿಯುತ್ತದೆಯೇ?: ಹತ್ಯೆ ವೇಳೆ ದರ್ಶನ್ ಧರಿಸಿದ್ದ ಬಟ್ಟೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿ ರೇಣುಕಾಸ್ವಾಮಿ ರಕ್ತದ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಟ್ಟೆಯನ್ನು ಸಂಪೂರ್ಣವಾಗಿ ಒಗೆದು ಒಣಹಾಕಿದರೂ ರಕ್ತದ ಕಲೆ ಉಳಿಯುತ್ತದೆಯೇ? ಎಂಬ ಮಾತು ನಂಬಲರ್ಹವಾಗಿದೆ. ಸ್ವಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಎಂದು ಉಲ್ಲೇಖಿಸಿ ಬಳಿಕ ಶೂ ರಿಕವರಿ ಮಾಡಿರುವುದಾಗಿ ಹೇಳಿದ್ಧಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಇದನ್ನೂ ಓದಿ:ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ - Darshan Bail Plea Hearing

ABOUT THE AUTHOR

...view details