ಬೆಂಗಳೂರು:ಮಾಜಿ ಸಚಿವರೊಬ್ಬರಿಗೆ ಬ್ಲ್ಯಾಕ್ಮೇಲ್ ಮಾಡಿ, ಹಣಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಲಪಾಡ್ ಬ್ರಿಗೇಡ್ ಹೆಸರಿನ ಅಭಿಮಾನಿ ಸಂಘಟನೆಯ ಕಲಬುರಗಿ ಘಟಕದ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ ಬಂಧಿತರು.
ಮಾಜಿ ಸಚಿವರ ಪುತ್ರ ನೀಡಿದ್ದ ದೂರಿನ ಅನ್ವಯ, ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು, ಶನಿವಾರ ಬೆಂಗಳೂರಿನ ಎಂ.ಜಿ. ರಸ್ತೆಯ ಬಳಿ ಹಣ ಪಡೆದುಕೊಳ್ಳಲು ಬಂದಿದ್ದ ಆರೋಪಿತರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮಾಜಿ ಸಚಿವರ ಪುತ್ರ ದೂರಿನ ವಿವರ:ಮಾಜಿ ಸಚಿವರೊಬ್ಬರನ್ನು ಕೆಲ ದಿನಗಳ ಹಿಂದೆ ಫೋನ್ ಮೂಲಕ ಪರಿಚಯಿಸಿಕೊಂಡಿದ್ದ ಮಂಜುಳಾ ಪಾಟೀಲ್, ಅವರೊಂದಿಗೆ ಆತ್ಮೀಯತೆ ಗಳಿಸಿಕೊಂಡಿದ್ದರು. ನಂತರ ಇಬ್ಬರ ನಡುವೆ ಫೋನ್ ಕರೆ, ವಿಡಿಯೋ ಕರೆಯ ಮೂಲಕ ಸಂಭಾಷಣೆ ನಡೆದಿತ್ತು. ನಂತರ ಆರೋಪಿ ಮಂಜುಳಾ ಪಾಟೀಲ್ ಹಾಗೂ ಶಿವರಾಜ್ ಪಾಟೀಲ್ 20 ಲಕ್ಷ ರೂ. ನೀಡದಿದ್ದರೆ ವಿಡಿಯೋ ಕರೆಯ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಮಾಜಿ ಸಚಿವರಿಗೆ ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ್ದಾರೆ. ಅಲ್ಲದೆ, ಮೂರು ದಿನದ ಹಿಂದೆ ಮಾಜಿ ಸಚಿವರ ಪುತ್ರನನ್ನು ಭೇಟಿಯಾಗಿದ್ದ ಆರೋಪಿಗಳು, 'ನಿಮ್ಮ ತಂದೆ ನಿಂದನಾತ್ಮಕ ಸಂದೇಶಗಳನ್ನು ಕಳಿಸಿದ್ದಾರೆ. ಇದೆಲ್ಲವೂ ಹೊರಗಡೆ ಬಾರದಿರಲು 20 ಲಕ್ಷ ರೂ. ಕೊಡಬೇಕು' ಎಂದು ಬೇಡಿಕೆಯಿಟ್ಟಿದ್ದರೆಂದು ಮಾಜಿ ಸಚಿವರ ಪುತ್ರ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.
''ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು, ಇಂದು ಹಣ ಪಡೆದುಕೊಳ್ಳಲು ಬೆಂಗಳೂರಿನ ಎಂ.ಜಿ. ರಸ್ತೆಯ ಗರುಡಾ ಮಾಲ್ ಬಳಿ ಬಂದಿದ್ದ ಆರೋಪಿತ ದಂಪತಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ 8 ದಿನ ಕಸ್ಟಡಿಗೆ ಪಡೆದುಕೊಂಡಿರುವುದಾಗಿ'' ಸಿಸಿಬಿಯ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ತೂಕದಲ್ಲಿ ಮೋಸ ಆರೋಪ ; ಪಾಂಡವಪುರದ ಮೂರು ಜ್ಯುವೆಲ್ಲರ್ಸ್ ಸೀಜ್ ಮಾಡಿದ ಅಧಿಕಾರಿಗಳು