ಕರ್ನಾಟಕ

karnataka

ETV Bharat / state

ಇಳಿದ 'ಬಿಳಿ ಬಂಗಾರ'ದ ಬೆಲೆ: ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಸುವಂತೆ ಸರ್ಕಾರಕ್ಕೆ ರೈತರ ಆಗ್ರಹ - LOSS OF COTTON CROP

ಅತಿಯಾದ ಮಳೆಯ ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದು ಹತ್ತಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಸಬೇಕು ಎಂದು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.

ನಾಶಗೊಂಡಿರುವ ಹತ್ತಿ ಬೆಳೆ.
ಹತ್ತಿ ಬೆಳೆ ನಾಶವಾಗಿರುವುದು. (ETV Bharat)

By ETV Bharat Karnataka Team

Published : Nov 8, 2024, 12:20 PM IST

ಹುಬ್ಬಳ್ಳಿ:ಹತ್ತಿ ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಬೆಳೆ. ಈ ಬಾರಿ ಹತ್ತಿ ರೈತರ ಕಣ್ಣಲ್ಲಿ ನೀರು ತರಿಸಿದೆ. ಒಂದೆಡೆ ನಿರಂತರ ‌ಮಳೆಯಿಂದ ಬೆಳೆ ಹಾನಿಯಾದರೆ, ಇತ್ತ ಬೆಲೆ ಇಳಿಕೆಯಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಿಳಿ ಬಂಗಾರ (ಹತ್ತಿ)ದ ದರ ಮುಕ್ತ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. ಅತಿವೃಷ್ಟಿಯ ಮಧ್ಯೆ ಕೈಗೆ ಬಂದಿರುವ ಒಂದಷ್ಟು ಬೆಳೆಯನ್ನು ಮಾರುಕಟ್ಟೆಗೆ ತಂದರೆ ಅಲ್ಲಿ ಉತ್ತಮ ಬೆಲೆಯೂ ಇಲ್ಲ. ಇದರಿಂದಾಗಿ ಮಾಡಿದ ಖರ್ಚು ಕೂಡಾ ವಾಪಸು ಬರುತ್ತಿಲ್ಲ ಎಂಬುದು ರೈತರ ಗೋಳು.

ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀಸುವಂತೆ ಸರ್ಕಾರಕ್ಕೆ ರೈತರ ಆಗ್ರಹ (ETV Bharat)

"ಪ್ರತಿ ವರ್ಷವೂ ಹತ್ತಿಗೆ ಉತ್ತಮ ದರ ಇರುತ್ತಿತ್ತು. ಈ ಬಾರಿ ಬೆಲೆ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ಕಾಟನ್ ಕಾರ್ಪೊರೇಶನ್ ಆಫ್ ಇಂಡಿಯಾ (ಸಿಸಿಐ) ಮೂಲಕ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಸುತ್ತದೆ. ಈ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ ರೈತರ ನೆರವಿಗೆ ಬರಬೇಕು" ಎಂದು ರೈತ ಮುಖಂಡ ಹೇಮನಗೌಡ ಪಾಟೀಲ್ ಒತ್ತಾಯಿಸಿದ್ದಾರೆ‌.

"ನಿರಂತರ ಮಳೆಯಿಂದ ಇಳುವರಿ ಕಡಿಮೆಯಾಗಿದೆ. ಎಕರೆಗೆ ಐದಾರು ಕ್ವಿಂಟಲ್ ಬರಬೇಕಿದ್ದ ಹತ್ತಿ 1-2 ಕ್ವಿಂಟಲ್‌ಗೆ ಇಳಿದಿದೆ. ಆದರೆ ಮಾರುಕಟ್ಟೆಯಲ್ಲಿ ವರ್ತಕರು 4-5 ಸಾವಿರಕ್ಕೆ ‌ಕ್ವಿಂಟಲ್ ಹತ್ತಿ ಕೇಳುತ್ತಿದ್ದಾರೆ. ಎಕರೆ ಹತ್ತಿ ಬೆಳೆಯಲು 10-15 ಸಾವಿರ ರೂ ಖರ್ಚು ಬರುತ್ತಿದೆ. ಈಗ ಬಾಯಿಗೆ ಬಂದ ದರಕ್ಕೆ ಮಾರಾಟವಾದರೆ ರೈತರು ಬೀದಿಗೆ ಬೀಳಲಿದ್ದಾರೆ. ಕೇಂದ್ರ ಸರ್ಕಾರ 2024-25ರಲ್ಲಿ ಉದ್ದ ಎಳೆಯ ಹತ್ತಿಗೆ ಪ್ರತಿ ಕ್ವಿಂಟಲ್‌ಗೆ 7,521 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಕಿರು ಎಳೆಯ ಹತ್ತಿಗೆ ಕ್ವಿಂಟಲ್‌ಗೆ 7,121 ರೂ. ನಿಗದಿ ಮಾಡಿದೆ. ಕಳೆದ ವರ್ಷದ ಬೆಂಬಲ ಬೆಲೆಗೆ (7,020ರೂ.) ಹೋಲಿಸಿದರೆ ಮತ್ತೆ 501 ರೂ. ಹೆಚ್ಚಳ ಮಾಡಲಾಗಿದೆ. ಇದೇ ಬೆಲೆಯಲ್ಲಾದರೂ ಸರ್ಕಾರ ಕೂಡಲೇ ಖರೀದಿ ಕೇಂದ್ರ ಆರಂಭಿಸಿಬೇಕು" ಎಂದು ರೈತ ಮುಖಂಡ ಬಸವರಾಜ್ ಅಣ್ಣಿಗೇರಿ ಆಗ್ರಹಿಸಿದರು.

ಹತ್ತಿ ಬೆಳೆ ಹಾಳಾಗಿರುವುದು. (ETV Bharat)

"ಧಾರವಾಡ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾಗಿ ಹತ್ತಿಯನ್ನು ಬೆಳೆಯಲಾಗುತ್ತದೆ. ಈ ಬಾರಿ ನಿಗದಿತ ಗುರಿಗಿಂತ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಆದರೂ, ಸುಮಾರು 32 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ. ಈ ವರ್ಷ 59 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಧಾರವಾಡ, ನವಲಗುಂದ, ಹುಬ್ಬಳ್ಳಿ, ಕುಂದಗೋಳ ಭಾಗದಲ್ಲಿ ಹೆಚ್ಚು ಬಿತ್ತನೆ ಮಾಡಿದ್ದಾರೆ. ಹೆಚ್ಚು ಮಳೆಯಾದ್ದರಿಂದ ಬಹಳಷ್ಟು ಕಡೆಗಳಲ್ಲಿ ಹತ್ತಿ ಬೆಳೆ ನೀರಲ್ಲಿ ನಿಂತು ಕೊಳೆತು ಹೋಗಿದೆ" ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ:ಮೈಸೂರು: ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ, ಟೊಮೆಟೊ, ತೆಂಗು

ABOUT THE AUTHOR

...view details