ಹುಬ್ಬಳ್ಳಿ: ಇಲ್ಲಿನಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಆರೋಪಿ ಪಯಾಜ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತನನ್ನು ಬಂಧಿಸಿದ ಪೊಲೀಸರ ತಂಡಕ್ಕೆ 'ಕಾಪ್ ಆಫ್ ದಿ ಮಂತ್' ಅವಾರ್ಡ್ ನೀಡಲಾಗಿದೆ.
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳು, ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಹುಬ್ಬಳ್ಳಿ ಉತ್ತರ ಉಪವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಿ.ಕೆ.ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಆರೋಪಿ ಫಯಾಜ್ ಬಾಬಾಸಾಹೇಬ ಖೊಂದುನಾಯಕ (23)ನನ್ನು ಕೃತ್ಯ ನಡೆದ ಕೇವಲ ಒಂದು ಗಂಟೆಯೊಳಗೆ ಹಿಡಿದು ಬಂಧಿಸಿತ್ತು. ನಂತರ ಅವಧಿಯೊಳಗೆ ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿತ್ತು.