ಬೆಂಗಳೂರು:ಅಭಿವೃದ್ಧಿಯಲ್ಲಿ ಕಲಬುರಗಿ ರಿಪಬ್ಲಿಕ್ ಆಗಿದೆ. ಬಳ್ಳಾರಿ ರೀತಿ ಆಗಿಲ್ಲ ಎಂದು ಪ್ರತಿಪಕ್ಷಗಳ ನಾಯಕರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಗೃಹ ಕಚೇರಿಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಆಯಿತು. ಕೆಕೆಆರ್ಡಿಬಿಗೆ ಐದು ಸಾವಿರ ಕೋಟಿ ಕೊಟ್ಟಿದ್ದೇವೆ. ಹೀಗೆ ಅಭಿವೃದ್ಧಿಯಲ್ಲಿ ರಿಪಬ್ಲಿಕ್ ಆಗಿದೆ. ನಿಮ್ಮ (ಬಿಜೆಪಿ) ಅವಧಿಯಲ್ಲಿ ಆದ ದೌರ್ಜನ್ಯ ರೀತಿ ರಿಪಬ್ಲಿಕ್ ಆಗಿಲ್ಲ. ನಮ್ಮ ಜಿಲ್ಲೆ, ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕೂ ಮುನ್ನ ನಿಮ್ಮ ನಾಯಕರ ಇತಿಹಾಸ ತಿಳಿದುಕೊಳ್ಳಿ ಎಂದು ಟಾಂಗ್ ಕೊಟ್ಟರು.
ಸಚಿವ ಪ್ರಿಯಾಂಕ್ ಖರ್ಗೆ (ETV Bharat) ಕಲಬುರಗಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದದ್ದು ಯಾರು?, ಮರಳು ಮಾಫಿಯಾ ನಡೆಸಿದ್ದು ಯಾರು? ಮಕ್ಕಳಿಗೆ ನೀಡುವ ಹಾಲಿನ ಪೌಡರ್ ಹಗರಣ ಸಂಬಂಧ ಯಾರ ಮೇಲೆ ಕೇಸ್ ಆಗಿದೆ? ರೈತರಿಗೆ ವಂಚನೆ ಮಾಡಿ ಚಾರ್ಜ್ ಶೀಟ್ ಹಾಕಿಸಿಕೊಂಡಿರುವ ನಾಯಕರು ಯಾರು? ಅಂತ ಅಲ್ಲಿನ ನಿಮ್ಮ ಬಿಜೆಪಿ ಸ್ನೇಹಿತರಿಂದ ತಿಳಿದುಕೊಳ್ಳಿ ಎಂದು ಪ್ರತಿಪಕ್ಷಗಳ ನಾಯಕರಿಗೆ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪ್ರತಿಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಬಂದು ನನ್ನ ರಾಜೀನಾಮೆಗೆ ಆಗ್ರಹಿಸಿದರು. ನನ್ನ ರಾಜೀನಾಮೆ ಕೇಳುವುದು ಬಿಜೆಪಿ ನಾಯಕರಿಗೆ ಫ್ಯಾಷನ್ ಆಗಿಬಿಟ್ಟಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಸಚಿನ್ ಆತ್ಮಹತ್ಯೆ ಪ್ರಕರಣ ತನಿಖೆಯಾಗಲಿ:ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ನಡೆದಿದೆ. ಈ ಘಟನೆ ಆಗಬಾರದಿತ್ತು. ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ. ಸಚಿನ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.
ಖಾಸಗಿ ಕಂಪನಿ ಮೇಲೂ ಮೃತ ಯುವಕ ಸಚಿನ್ ದೂರು ಕೊಟ್ಟಿದ್ದಾನೆ. ಈ ಕೇಸ್ನಲ್ಲಿ ಎಂಟು ಜನ ಆರೋಪಿಗಳಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನಿದೆ?. ನಾನು ಎಲ್ಲಾದರೂ ಮೌಖಿಕ ಆದೇಶ ಕೊಟ್ಟಿದ್ದೀನಿ ಅಂತಾ ಅವರು ಹೇಳಿದ್ದಾರಾ?, ಈ ಪ್ರಕರಣ ತನಿಖೆ ಆಗಿ ಸತ್ಯಾಸತ್ಯತೆ ಬರಲಿ ಎಂದು ಪ್ರತಿಕ್ರಿಯೆ ನೀಡಿದರು.
ಸಚಿನ್ ಆತ್ಮಹತ್ಯೆ ಪ್ರಕರಣವನ್ನು ರೈಲ್ವೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರ ಕೈಯಲ್ಲಿ ಆಗುತ್ತಿಲ್ಲ. ಸಿಐಡಿಗೆ ಕೊಡಿ ಅಂತ ನಾನೂ ಸಹ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಯಾರೇ ಆಗಲಿ, ಪಾರದರ್ಶಕವಾಗಿ ತನಿಖೆ ಆಗಿಲಿ ಎಂದು ಹೇಳಿದರು.
ಕುಟುಂಬಸ್ಥರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಆರೋಪಿಗಳು ಯಾರೂ ನನ್ನ ಸಂಪರ್ಕದಲ್ಲಿ ಇಲ್ಲ. ಎಫ್ಎಸ್ಎಲ್ ವರದಿ ಬರಲಿ, ಅವರೇ ಪತ್ರ ಬರೆದಿದ್ದಾರಾ?. ಅಥವಾ ಫೇಕ್ ಅನ್ನುವುದು ನನಗೆ ಗೊತ್ತಿಲ್ಲ. ಟೆಂಡರ್ ವಿಷಯದಲ್ಲಿ ಯಾರೂ ಸಹ ನನ್ನ ಭೇಟಿ ಮಾಡಿಲ್ಲ. ಆ ಯುವಕ ಕೂಡ ಭೇಟಿ ಮಾಡಿಲ್ಲ. ವಿಚಾರಣೆಗೆ ಕರೆಯಬೇಡಿ ಅಂತ ನಾನೇನಾದರೂ ಹೇಳಿದ್ದಿನಾ?, ಕಾನೂನಿನ ಪ್ರಕಾರ ತನಿಖೆ ಆಗಲಿ. ನಾನು ಬೀದರ್ ಎಸ್ಪಿ ಹತ್ತಿರ ಇದುವರೆಗೂ ಮಾತನಾಡಿಲ್ಲ ಎಂದು ಎಂದು ತಿಳಿಸಿದರು.
ನಾನು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಸಿಐಡಿನಾ, ನ್ಯಾಯಾಂಗ ತನಿಖೆನಾ ಎಂಬುದನ್ನು ಗೃಹ ಸಚಿವರು ತೀರ್ಮಾನ ಮಾಡುತ್ತಾರೆ. ನಾನು ದುಡ್ಡು ಮಾಡುವುದಕ್ಕೆ ಬಂದಿಲ್ಲ. ಐದಾರು ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಶಾಸಕ ಪಿ. ರಾಜೀವ್, ಬಿಜೆಪಿ ಸಾಮಾಜಿಕ ಜಾಲತಾಣದ ಮೇಲೆ ಕೇಸ್ ಹಾಕಿದ್ದೇನೆ. ಇದುವರೆಗೂ ಉತ್ತರ ಬಂದಿಲ್ಲ. ನಾನು ಇವರ ರೀತಿ ಹಿಟ್ ಅಂಡ್ ರನ್ ಅಲ್ಲ ಎಂದು ಹೇಳಿದರು.
ಪೊಲೀಸ್ ಸ್ಟೇಶನ್ನಲ್ಲಿ ಬಿಜೆಪಿಯವರು ಗೂಂಡಾಗಿರಿ ಮಾಡಿದರೆ ನಾವು ಸುಮ್ಮನಿರಬೇಕಾ?, ಬಿಜೆಪಿಯ ಹಾಲಿ, ಮಾಜಿ ಶಾಸಕರು ಗಲಾಟೆ ಮಾಡ್ತಾರೆ. ಬಿಜೆಪಿಯವರಿಗೆ ಕಾನೂನಿನ ಅರಿವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಇದನ್ನೂ ಓದಿ:ಗುತ್ತಿಗೆದಾರ ಸಚಿನ್ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ