ಬೀದರ್ :ಗುತ್ತಿಗೆದಾರಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.
ಭಾನುವಾರ ಬಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದ ಮೃತ ಸಚಿನ್ ಪಾಂಚಾಳ್ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ. ನಂತರ ಈ ಕುರಿತು ಮಾತನಾಡಿದ ಬಿ ವೈ ವಿಜಯೇಂದ್ರ ಅವರು, ಸಚಿನ್ ಆತ್ಮಹತ್ಯೆ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿದೆ. ಸಚಿನ್ ಅವರ ಪ್ರಾಣ ಉಳಿಸುವಂತ ಕೆಲಸವನ್ನು ಪೊಲೀಸರು ಮಾಡಬೇಕಿತ್ತು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮಾತನಾಡಿದರು (ETV Bharat) ''ಪೊಲೀಸರ ವರ್ತನೆಯಿಂದ ಒಂದು ಮುಗ್ಧ ಜೀವ ಹೊರಟೋಗಿದೆ. ಬಡ ಕುಟುಂಬದ ಆಧಾರ ಸ್ತಂಭ ಮುರಿದುಬಿದ್ದಿದೆ. ಸಹೋದರಿಯರು ಏನು ಮಾತಾಡಿದರು ಎಂಬುದನ್ನ ತಾವೇ ಕೇಳಿಸಿಕೊಂಡಿದ್ದೀರಿ. ಹೆಣ್ಣು ಮಕ್ಕಳು ಠಾಣೆಗೆ ಹೋಗಿ ತಮ್ಮ ಪ್ರಾಣ ಉಳಿಸುವಂತೆ ಗೋಗರೆದರೂ ಪೊಲೀಸರು ಏನೂ ಮಾಡಿಲ್ಲ'' ಎಂದು ಹೇಳಿದ್ದಾರೆ.
''ಸಚಿನ್ ಡೆತ್ ನೋಟ್ನಲ್ಲಿ ಏನು ಬರೆದಿದ್ದಾರೆ, ಪೊಲೀಸರು ಮಧ್ಯಾಹ್ನ 2 ಗಂಟೆಯಿಂದ 9 ಗಂಟೆವರೆಗೂ ಓಡಾಡಿಸಿದ್ದಾರೆ. ಮನುಷ್ಯತ್ವ ಇದ್ದವರು ಯಾರಾದರೂ ಹೀಗೆ ನಡೆದುಕೊಳ್ಳಲ್ಲ. ಇದರ ಹಿಂದೆ ಯಾರ್ಯಾರು ಇದಾರೆ ಅನ್ನೋದು ಪೊಲೀಸರಿಗೆ ಎಲ್ಲ ಗೊತ್ತಿದೆ. ರಾಜು ಕಪನೂರ್ ಲಂಚ ಬೇಕು ಎಂದು ಮನೆಗೆ ಬಂದು ಧಮ್ಕಿ ಹಾಕಿದ್ದಾನೆ. ಸರ್ಕಾರಕ್ಕೆ ಏನಾದರೂ ನೈತಿಕತೆ ಇದ್ದರೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಸಚಿನ್ ಕುಟುಂಬಸ್ಥರು ಸಿಬಿಐ ತನಿಖೆಯಾಗಬೇಕೆಂದು ಹೇಳುತ್ತಿದ್ದಾರೆ'' ಎಂದರು.
''ಕಲಬುರಗಿಯಲ್ಲಿ ಇದೇನು ಹೊಸದಲ್ಲ, ನಾಲ್ಕೈದು ಇಂತಹ ಪ್ರಕರಣಗಳು ನಡೆದಿವೆ. ಅಂತಹ ಪ್ರಕರಣಗಳನ್ನ ರಾಜಕೀಯ ಪ್ರಭಾವ ಬಳಸಿ ಮುಚ್ಚುವಂತಹ ಕೆಲಸ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ?. ಪೊಲೀಸ್ ಠಾಣೆಗಳು ರಾಜ್ಯದಲ್ಲಿ ಕಾಂಗ್ರೆಸ್ ಕಚೇರಿಗಳಾಗಿವೆ. ಕಲಬುರಗಿಯಲ್ಲಿ ಇದು ಅತಿ ನಡೆಯುತ್ತಿದೆ. ಅವತ್ತು ಪೊಲೀಸರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಕ್ಕೆ ಸಚಿನ್ ಪ್ರಾಣ ಕಳೆದುಕೊಂಡಿದ್ದಾನೆ'' ಎಂದು ಹೇಳಿದರು.
''ಪ್ರಿಯಾಂಕ್ ಖರ್ಗೆಯವರು ನಮ್ಮ ಮೇಲೂ ಪ್ರಕರಣ ದಾಖಲಿಸುತ್ತಾರಂತೆ. ನಾಚಿಕೆಯಾಗಬೇಕು ಪ್ರಿಯಾಂಕ್ ಖರ್ಗೆಯವರಿಗೆ. ನಿಮಗೆ ಕಿಂಚಿತ್ತು ಮಾನ ಮರ್ಯಾದೆ ಇದ್ದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ತನಿಖೆಗೆ ಸಿದ್ಧರಾಗಬೇಕು. ಸಿಐಡಿಯಿಂದ ನ್ಯಾಯ ಹೇಗೆ ಸಿಗಲು ಸಾಧ್ಯ, ಸಿಬಿಐ ತನಿಖೆ ಆಗಬೇಕು. ಇದು ಆತ್ಮಹತ್ಯೆ ಅಲ್ಲ, ಸರ್ಕಾರ ಮಾಡಿಸಿರುವ ಕೊಲೆ ಎಂದು ಹೆಣ್ಣುಮಕ್ಕಳು ಹೇಳುತ್ತಿದ್ದಾರೆ. ನಮಗೆ ಪರಿಹಾರ ಬೇಡ, ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಹೇಳುತ್ತಿದ್ದಾರೆ'' ಎಂದರು.
''ನಾನು ರಾಜ್ಯದ ಮುಖ್ಯಮಂತ್ರಿಗೆ ಹೇಳುತ್ತೇನೆ. ತಕ್ಷಣವೇ ಪ್ರಿಯಾಂಕ್ ಖರ್ಗೆಯನ್ನ ಸಚಿವ ಸ್ಥಾನದಿಂದ ಕೈಬಿಡಬೇಕು. ಈ ಬಡ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ಸಿಬಿಐ ತನಿಖೆಗೆ ಕೊಡಬೇಕು. ಪ್ರಿಯಾಂಕ್ ಖರ್ಗೆ ಅವರು ರಾತ್ರಿ ಬರ್ತಾರೆ, ರಾತ್ರಿ 2 ಗಂಟೆಗೆ ಬಂದು ಬೆದರಿಕೆ ಹಾಕಬಹುದು. ಹೀಗೆ ಬೆದರಿಕೆ ಹಾಕಿ ಬಹಳಷ್ಟು ಪ್ರಕರಣಗಳನ್ನ ಖರ್ಗೆ ಮುಚ್ಚಿ ಹಾಕಿದ್ದಾರೆ. ಆತ್ಮಸಾಕ್ಷಿ ಇದ್ದರೆ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿಬಿಐ ತನಿಖೆಗೆ ಕೊಡಿ. ನಾವು ನಾಯಕರ ಸಭೆ ನಡೆಸಿ ಯಾವ ರೀತಿ ಹೋರಾಟ ಮಾಡಬೇಕೆಂದು ನಿರ್ಧರಿಸುತ್ತೇವೆ'' ಎಂದು ವಿಜಯೇಂದ್ರ ಹೇಳಿದರು.
''ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಸಿಬಿಐ ತನಿಖೆಗೆ ಕೊಡಬೇಕು, ಪ್ರಕರಣದ ಹಿಂದೆ ಯಾವ ಮಹಾಶಯ ಇದ್ದರೂ ನಾವು ಕೇರ್ ಮಾಡಲ್ಲ. ಡೆತ್ ನೋಟ್ನಲ್ಲಿ ಹೆಸರು ಉಲ್ಲೇಖ ಮಾಡಿದ್ದಾರೆ. ನಾಚಿಕೆಯಾಗಬೇಕು ಈ ಸರ್ಕಾರಕ್ಕೆ. ಹಿಂದೆ ಯಾವ ಸರ್ಕಾರ ಏನು ಮಾಡಿದೆ ಅಂತ ಕೇಳಲು ನಾಚಿಕೆ ಆಗಬೇಕು. ಇಂತಹ ಪ್ರಕರಣದಲ್ಲೂ ಹಿಂದೆ ಯಾರು ಏನು ಮಾಡಿದ್ದಾರೆ ಅಂತ ಹೇಳೋದು ಎಷ್ಟು ಸರಿ?. ಒಂದು ಕೋಟಿ ರೂಪಾಯಿ ಕೊಡಬೇಕೆಂದು ನಾವು ಒತ್ತಾಯ ಮಾಡುತ್ತೇವೆ. ಆ ಹೆಣ್ಣು ಮಕ್ಕಳ ಕಣ್ಣೀರು ನೋಡಿದರೆ ರಾಜಕೀಯ ಮಾಡುತ್ತಿದ್ದೇವೆ ಅನಿಸುತ್ತಾ?'' ಎಂದು ವಿಜಯೇಂದ್ರ ಪ್ರಶ್ನಿಸಿದರು.
ಇದನ್ನೂ ಓದಿ :ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ: ಪ್ರಿಯಾಂಕ್ ಖರ್ಗೆ - MINISTER PRIYANK KHARGE