ಹುಬ್ಬಳ್ಳಿ:ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ವಾಣಿಜ್ಯನಗರಿಯ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ಜಿಲ್ಲಾ ಗ್ರಾಹಕರ ಆಯೋಗ 10 ಲಕ್ಷ ರೂ. ದಂಡ ವಿಧಿಸಿದೆ. ಆಸ್ಪತ್ರೆಯ ಆಯ (ಸಹಾಯಕಿ) ನಾಲ್ಕು ದಿನದ ಮಗುವನ್ನು ಬಿಸಿನೀರಿನ ಟಬ್‌ನಲ್ಲಿ ಕೂರಿಸಿ, ಸುಟ್ಟ ಗಾಯ ಮಾಡಿದ್ದ ತಪ್ಪು ಮರೆಮಾಚಲು ಮಗುವಿಗೆ ಎಪಿಡರ್ಮೊಲಿಸಿಸ್ ಬುಲ್ಲೋಸಾ ಚರ್ಮ ರೋಗ ಇರಬಹುದು ಎಂದು ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಆಸ್ಪತ್ರೆಗೆ ದಂಡ ವಿಧಿಸಲಾಗಿದೆ.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ.ಹಿರೇಮಠ ಅವರು ಈ ಆದೇಶ ನೀಡಿದ್ದಾರೆ. ಘಟನೆ ನಡೆದ ಅವಧಿಯಲ್ಲಿ ವಿಮೆ ಚಾಲ್ತಿಯಲ್ಲಿ ಇದ್ದಿದ್ದರಿಂದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯು ಪರಿಹಾರದ ಶೇಕಡಾ 75 ರಷ್ಟು ಭಾಗ ಹಾಗೂ ಬಾಕಿ ಶೇ. 25 ರಷ್ಟನ್ನು ಆಸ್ಪತ್ರೆಯವರು ಪಾವತಿಸಬೇಕು. ತೀರ್ಪು ನೀಡಿದ ದಿನದಿಂದ ತಿಂಗಳೊಳಗಾಗಿ 10 ಲಕ್ಷ ರೂ. ಪರಿಹಾರ ನೀಡಬೇಕು. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ. 8ರ ಬಡ್ಡಿ ಲೆಕ್ಕದಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ ಹಂಜಿ ಅವರು 2019ರ ಡಿಸೆಂಬರ್ 10ರಂದು ಆಸ್ಪತ್ರೆಗೆ ಪತ್ನಿ ರೇಖಾ ಅವರನ್ನು ದಾಖಲಿಸಿದ್ದರು. ಆಸ್ಪತ್ರೆಗೆ ದಾಖಲಾದ ದಿನವೇ ರೇಖಾ ಅವರಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿತ್ತು. ಡಿ.14ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕಿತ್ತು. ಆದರೆ, ಬಿಸಿ ನೀರಿದ್ದ ಟಬ್‍ನಲ್ಲಿ ಮಗುವನ್ನು ಸ್ನಾನಕ್ಕೆ ಕೂರಿಸಿದ್ದರಿಂದ ಪೃಷ್ಠದ ಭಾಗ ಸುಟ್ಟು, ಚರ್ಮ ಸುಲಿದಿತ್ತು. ಈ ಬಗ್ಗೆ ಮಗುವಿನ ಪೋಷಕರು ಆಸ್ಪತ್ರೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದರು.