ಬೆಂಗಳೂರು:ಆರೋಪಿಯೊಬ್ಬನ ಜೊತೆ ಸೇರಿ ಎಫ್ಐಆರ್ ದಾಖಲಿಸಿಕೊಂಡು, ವಿಚಾರಣೆ ಕೈಗೊಳ್ಳದೇ ಚಾರ್ಜ್‌ಶೀಟ್ ಸಲ್ಲಿಸಿದ್ದ ಕಾನ್ಸ್‌ಟೇಬಲ್ ಓರ್ವರನ್ನು ಅಮಾನತುಗೊಳಿಸಿ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಆದೇಶಿಸಿದ್ದಾರೆ. ಆರ್.ಆರ್.ನಗರ ಠಾಣೆಯ ಯದುಕುಮಾರ್ ಅಮಾನತಾದ ಕಾನ್ಸ್‌ಟೇಬಲ್.
ಆಗಿದ್ದೇನು?:ಯುವತಿಯೊಬ್ಬಳ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬೆದರಿಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಜೈಲು ಸೇರಿ, ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಂಡಿದ್ದ ಆರೋಪಿ, ಆರ್.ಆರ್.ನಗರ ಠಾಣೆಯಲ್ಲಿ ಬರಹಗಾರ (ರೈಟರ್) ಆಗಿದ್ದ ಯದುಕುಮಾರ್ ಎಂಬವರನ್ನು ಭೇಟಿಯಾಗಿದ್ದನು. ಯದುಕುಮಾರ್, ಆರೋಪಿಯ ಆಣತಿಯಂತೆ ಯುವತಿಯ ವಿರುದ್ಧ ಬೆದರಿಕೆ ಆರೋಪದಡಿ ಸುಳ್ಳು ಎಫ್ಐಆರ್ ದಾಖಲಿಸಿದ್ದರು. ಬಳಿಕ ಪ್ರಕರಣದಲ್ಲಿ ಯುವತಿಯ ವಿಚಾರಣೆ ಕೂಡಾ ನಡೆಸದೇ, ಎಫ್ಐಆರ್ ದಾಖಲಾದ 35 ದಿನಗಳಲ್ಲೇ, ಸರ್ಕಾರಿ ವಕೀಲರ ಗಮನಕ್ಕೆ ತಂದು ಚಾರ್ಜ್‌ಶೀಟ್ ಪ್ರತಿಯನ್ನು ಪೊಲೀಸ್ ಐಟಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿದ್ದ.