ಮಂಡ್ಯ: ತೀವ್ರ ಕುತೂಹಲ ಕೆರಳಿಸಿದ್ದ ಮದ್ದೂರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕೈ ವಶವಾಗಿದೆ. ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ಮೈತ್ರಿ ನಾಯಕರು ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜೆಡಿಎಸ್‌ನ 12 ಸದಸ್ಯರಲ್ಲಿ 6 ಜನ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಜೆಡಿಎಸ್ - ಬಿಜೆಪಿ ನಾಯಕರಿಗೆ ಬಿಗ್ ಶಾಕ್ ನೀಡಿದರು.
ಮದ್ದೂರು ಪುರಸಭೆಯ ಒಟ್ಟು 23 ಸದಸ್ಯರಲ್ಲಿ 12 ಜೆಡಿಎಸ್, 4 ಕಾಂಗ್ರೆಸ್, ಬಿಜೆಪಿ 1 ಮತ್ತು 6 ಪಕ್ಷೇತರ ಸದಸ್ಯರಿದ್ದರು. ಮೊದಲ ಅವಧಿಗೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ನ 6, ಪಕ್ಷೇತರರು 4 ಹಾಗೂ ಓರ್ವ ಬಿಜೆಪಿ ಸದಸ್ಯರು ಬೆಂಬಲ ನೀಡಿದ್ದಾರೆ. ಇದರಿಂದಾಗಿ ಕೈ ಪಕ್ಷ ಮೇಲುಗೈ ಸಾಧಿಸಿತು. ನಗರಸಭೆ ನೂತನ ಅಧ್ಯಕ್ಷರಾಗಿ ಕೋಕಿಲ ಅರುಣ್ ಹಾಗೂ ಉಪಾಧ್ಯಕ್ಷರಾಗಿ ಟಿ.ಆರ್.ಪ್ರಸನ್ನಕುಮಾರ್ ಆಯ್ಕೆಯಾದರು.
ಶಾಸಕರ ಕೆ.ಎಂ.ಉದಯ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಶೋಭಾರಾಣಿ, ಉಪಾಧ್ಯಕ್ಷ ಸ್ಥಾನಕ್ಕೆ ಮನೋಜ್ ಕುಮಾರ್ ಸ್ಪರ್ಧಿಸಿ ತಲಾ 8 ಮತಗಳನ್ನು ಪಡೆದು ಪರಾಭವಗೊಂಡರು.
ಮದ್ದೂರು ಪುರಸಭೆ ಕಾಂಗ್ರೆಸ್ ತೆಕ್ಕೆಗೆ (ETV Bharat) ಭರ್ಜರಿ ಗೆಲುವಿನ ಬಳಿಕ ಶಾಸಕ ಕೆ.ಎಂ.ಉದಯ್ ಪ್ರತಿಕ್ರಿಯಿಸಿ, "ಜೆಡಿಎಸ್‌ನ 6 ಮಂದಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದಾರೆ. ಜೆಡಿಎಸ್-ಬಿಜೆಪಿಯ ಆಂತರಿಕ ಭಿನ್ನಮತ ವಿಚಾರ ನಮಗೆ ಗೊತ್ತಿಲ್ಲ. ಪಟ್ಟಣದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜೆಡಿಎಸ್ ಸದಸ್ಯರು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಎಲ್ಲ ಸದಸ್ಯರ ಸಹಕಾರದಿಂದ ಅಧಿಕಾರ ಹಿಡಿದಿದ್ದೇವೆ. ನಾವು ಯಾರನ್ನೂ ಹೈಜಾಕ್ ಮಾಡಿಲ್ಲ" ಎಂದು ಹೇಳಿದರು.
"ಇನ್ನು ಮುಂದೆ ಮದ್ದೂರು ಪಟ್ಟಣ ಅಭಿವೃದ್ಧಿಯತ್ತ ಸಾಗಲಿದೆ. ಹಿಂದಿನ ವಾತಾವರಣವೇ ಬೇರೆ ಮುಂದಿನ ವಾತಾವರಣವೇ ಬೇರೆ. ನಾವು ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಜನರ ಕೆಲಸವೇ ನನಗೆ ಮುಖ್ಯ. ಇನ್ನುಳಿದ ಜೆಡಿಎಸ್ ಸದಸ್ಯರಿಗೆ ನಾನು ಗಾಳ ಹಾಕುವ ಅವಶ್ಯಕತೆ ಇಲ್ಲ. ಅಭಿವೃದ್ಧಿ ಬೇಕು ಅನ್ನೋದಾದರೆ ಅವರೇ ಬಂದು ನಮ್ಮ ಜೊತೆ ಕೈ ಜೋಡಿಸಿದರೆ, ಒಂದೇ ಕುಟುಂಬದಂತೆ ಒಟ್ಟಿಗೆ ಹೋಗುತ್ತೇವೆ" ಎಂದರು.
ಪಾಲಿಕೆ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಒಲಿಯುತ್ತಿದ್ದಂತೆ ಕೈ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದನ್ನೂ ಓದಿ: ಎಲ್ಲ ಪಕ್ಷಗಳ ಹಿರಿಯ ನಾಯಕರಿಂದ ಹೊಂದಾಣಿಕೆ ರಾಜಕಾರಣ: ಪ್ರತಾಪ್ ಸಿಂಹ ಅಸಮಾಧಾನ - Pratap Simha