ಬೆಂಗಳೂರು: ಜೂನ್ 3 ರಂದು ನಡೆಯಲಿರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿರುವ ನಾಲ್ವರನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ನಡೆಯಲಿರುವ ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಂಡರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ದಿಸಿ ಕಾಂಗ್ರೆಸ್ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದ್ದಾರೆ. ಇವರ ಈ ನಡೆಯು ಪಕ್ಷ ವಿರೋಧಿ ಚಟುವಟಿಕೆಯಾಗಿರುವ ಹಿನ್ನೆಲೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಎಲ್ಲ ಬಂಡಾಯ ಅಭ್ಯರ್ಥಿಗಳನ್ನು ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಪಕ್ಷದ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಆದೇಶಿಸಿದ್ದಾರೆ.
ನೈರುತ್ಯ ಪದವೀಧರರ ಕ್ಷೇತ್ರದಿಂದ ಬಂಡಾಯವಾಗಿ ಕಣದಲ್ಲಿರುವ ಶಿವಮೊಗ್ಗದ ಎಸ್.ಪಿ. ದಿನೇಶ್, ಬೆಂಗಳೂರು ಪದವೀಧರ ಕ್ಷೇತ್ರದಿಂದ ಕಣದಲ್ಲಿರುವ ಬೆಂಗಳೂರಿನ ಫರ್ಡಿನಾಂಡ್ ಲಾರೆನ್ಸ್, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಣದಲ್ಲಿರುವ ಚಿಕ್ಕಮಗಳೂರಿನ ಬಿ.ಆರ್.ನಂಜೇಶ್, ಆಗ್ನೆಯ ಶಿಕ್ಷಕರ ಕ್ಷೇತ್ರದಲ್ಲಿ ಕಣದಲ್ಲಿರುವ ಚಿತ್ರದುರ್ಗ ಜಿಲ್ಲೆಯ ಲೋಕೇಶ್ ತಾಳಿಕಟ್ಟೆ ಮತ್ತು ಬ್ಯಾಟರಾಯನಪುರದ ವಿನೋದ್ ಶಿವರಾಜ್ ಅವರನ್ನು ಆರು ವರ್ಷಗಳ ಕಾಲ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.