ಕೋಲಾರ :ಕೋಲಾರದ ಮುಳಬಾಗಿಲಿನ ಕುರುಡುಮಲೆ ವಿನಾಯಕನ ಸನ್ನಿಧಿಯಲ್ಲಿ ಪ್ರಜಾಧ್ವನಿ ಯಾತ್ರೆಗೆ ಅಧಿಕೃತವಾಗಿ ಕಾಂಗ್ರೆಸ್ ಚಾಲನೆ ನೀಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯ ರಣಕಹಳೆ ಊದಲಾಗಿದೆ.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಜಾಲಪ್ಪ ಆಸ್ಪತ್ರೆ ಆವರಣದಲ್ಲಿ ಬಂದಿಳಿದ ಸಿಎಂ ಹಾಗೂ ಡಿಸಿಎಂ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹೈದರ್ ಅಲಿ ದರ್ಗಾಕ್ಕೆ ಭೇಟಿ ನೀಡಿದರು. ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ಕೈ ನಾಯಕರು ಪ್ರಜಾಧ್ವನಿ ಯಾತ್ರೆಯ ರೋಡ್ ಶೋ ಮಾಡಿದರು.
ನಾಮಪತ್ರ ಸಲ್ಲಿಕೆ ವೇಳೆ ಕಾಣಿಸಿಕೊಂಡಿದ್ದ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕಿ ರೂಪಕಲಾ ಹಾಗು ಕಾಂಗ್ರೆಸ್ ಮುಖಂಡರು ಇಂದು ಗೈರಾಗಿದ್ದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಬಣದ ಮುಖಂಡರು ಹಾಜರಾಗುವ ಮೂಲಕ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇರುವುದು ಪ್ರದರ್ಶನವಾಯಿತು.
ಇದೆ ವೇಳೆ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ''ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಆದರೆ ಬಿಜೆಪಿಯವರು ಅಕ್ಕಿ ಕೊಡುವ ವಿಚಾರದಲ್ಲಿ ಮೋಸ ಮಾಡಿದ್ದಾರೆ. ನರೇಂದ್ರ ಮೋದಿ ಅವರು 10 ವರ್ಷ ಅಧಿಕಾರದಲ್ಲಿ ಇದ್ದರೂ ನುಡಿದಂತೆ ನಡೆದಿಲ್ಲ. ಎಲ್ಲಾ ವಸ್ತುಗಳ ಬೆಲೆ ಹೆಚ್ಚು ಮಾಡಿದ್ದಾರೆ. 15 ಲಕ್ಷ ರೂ. ಬಂದಿಲ್ಲ. ಜಾತಿ ಹೆಸರಲ್ಲಿ ಜನರನ್ನು ವಿಂಗಡಣೆ ಮಾಡುತ್ತಿರುವ ಬಿಜೆಪಿಗೆ ಯಾವತ್ತೂ ಮತ ನೀಡಬೇಡಿ. ಬಿಜೆಪಿ ಮತ್ತು ಜೆಡಿಎಸ್ನವರು ಒಂದಾಗಿದ್ದಾರೆ'' ಎಂದರು.