ಕರ್ನಾಟಕ

karnataka

ETV Bharat / state

11 ಮಸೂದೆ ವಾಪಸ್‌ ಕಳಿಸಿದ ರಾಜ್ಯಪಾಲರ ಕ್ರಮಕ್ಕೆ ಕೈ ಶಾಸಕರು ಗರಂ: ಕಾನೂನು ಹೋರಾಟದ ಎಚ್ಚರಿಕೆ - MLAs outrage on Governor

11 ಮಸೂದೆ ವಾಪಸ್‌ ಕಳಿಸಿದ ರಾಜ್ಯಪಾಲರ ಕ್ರಮಕ್ಕೆ ಕೈ ಶಾಸಕರು ಆಕ್ರೋಶ ವ್ಯಕ್ತಪಡಿಸಿ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

LEGAL FIGHT  MLA AGAINST GOVERNOR  BENGALURU
11 ಮಸೂದೆ ವಾಪಸ್‌ ಕಳಿಸಿದ ರಾಜ್ಯಪಾಲರ ಕ್ರಮಕ್ಕೆ ಕೈ ಶಾಸಕರು ಗರಂ (ETV Bharat)

By ETV Bharat Karnataka Team

Published : Aug 24, 2024, 8:18 AM IST

ಬೆಂಗಳೂರು:ಉಭಯ ಸದನಗಳಲ್ಲಿ ಅಂಗೀಕಾರವಾದ 11 ಮಸೂದೆಗಳನ್ನು ವಾಪಸ್‌ ಕಳುಹಿಸಿರುವ ರಾಜ್ಯಪಾಲರ ಕ್ರಮಕ್ಕೆ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ತೀವ್ರವಾಗಿ ಖಂಡಿಸಿದ್ದಾರೆ. ಜನರ ವಿಶ್ವಾಸ ಗಳಿಸಿ, ಜನಪ್ರಿಯವಾದ ಸರ್ಕಾರದ ಕಾರ್ಯಚಟುವಟಿಕೆಗೆ ಅಡಿಗಡಿಗೂ ಅಡ್ಡಿ ಮಾಡುತ್ತಿರುವ ರಾಜ್ಯಪಾಲರ ಕ್ರಮ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಶಾಸಕರಾದ ಮಂಜುನಾಥ ಭಂಡಾರಿ, ಎಸ್.ರವಿ, ಅನಿಲ್ ಕುಮಾರ್‌, ರಾಜೇಂದ್ರ ರಾಜಣ್ಣ, ದಿನೇಶ್ ಗೂಳಿಗೌಡ, ಸುನಿಲ್ ಗೌಡ ಪಾಟೀಲ್‌, ಚಂದ್ರಶೇಖರ ಪಾಟೀಲ, ಚೆನ್ನರಾಜು, ಮಧು ಮಾದೇಗೌಡ, ಡಾ.ತಿಮ್ಮಯ್ಯ, ರಾಮೋಜಿ ಗೌಡ ,DT ಶ್ರೀನಿವಾಸ, ಶರಣಗೌಡ ಪಾಟೀಲ್‌, ಭೀಮರಾವ್‌ ಪಾಟಿಲ. ತಿಪ್ಪಣ್ಣಾ ಕಮಕನೂರು ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿ, ರಾಜ್ಯಪಾಲರ ನಡೆಯನ್ನು ಖಂಡಿಸಿದ್ದಾರೆ.

ಆಗಸ್ಟ್‌ ತಿಂಗಳಲ್ಲಿ ರಾಜ್ಯಪಾಲರು 6 ಪ್ರಮುಖ ಮಸೂದೆಗಳನ್ನು ಹಿಂತಿರುಗಿಸಿದ್ದಾರೆ. ಒಟ್ಟು 11 ವಿಧೇಯಕಗಳನ್ನು ರಾಜ್ಯಪಾಲರು ವಾಪಸ್‌ ಕಳಿಸಿ ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ. ಕರ್ನಾಟಕ ಸಾರ್ವಜನಿಕ ಭ್ರಷ್ಟಾಚಾರ ತಡೆ ವಿಧೇಯಕ, ಕರ್ನಾಟಕ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ, ಕರ್ನಾಟಕ ಟೌನ್‌ ಆಂಡ್‌ ಕಂಟ್ರೀ ಪ್ಲಾನಿಂಗ್‌ ವಿಧೇಯಕ, ಕರ್ನಾಟಕ ಶಾಸಕಾಂಗ ಸದಸ್ಯರ ಅನರ್ಹತೆ ತಡೆ ವಿಧೇಯಕ, ಕರ್ನಾಟಕ ಪುರಸಭಗಳು ಮತ್ತು ಇತರೇ ಕೆಲವು ಕಾನೂನು ವಿಧೇಯಕ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ವಿಧೇಯಕ, ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಗದಗ ಬೆಟಗೇರಿ ವ್ಯಾಪಾರ ಸಂಸ್ಕೃತಿ ಪ್ರದರ್ಶನ ಪ್ರಾಧಿಕಾರ ವಿಧೇಯಕ, ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕಗಳನ್ನು ರಾಜ್ಯಪಾಲರು ಇದುವರೆಗೆ ವಾಪಸ್‌ ಮಾಡಿದ್ದಾರೆ. ಈ ಕ್ರಮ ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಮಸೂದೆಗಳು ಅಂಗೀಕಾರವಾಗಿದ್ದರೂ ಕಾಯ್ದೆಯಲ್ಲಿ ಲೋಪದೋಷಗಳಿದ್ದರೆ, ಸ್ಪಷ್ಟನೆ ಕೇಳುವ ಅಧಿಕಾರ ರಾಜ್ಯಪಾಲರಿಗಿದೆ. ಆದರೆ, ವಿರೋಧಪಕ್ಷದವರು ವಿರೋಧಿಸಿದ್ದಾರೆ ಎಂಬ ಕಾರಣಕ್ಕೆ ಮಸೂದೆಗಳನ್ನು ವಾಪಸ್‌ ಕಳಿಸುವುದು ಸರಿಯಾದ ಕ್ರಮವಲ್ಲ. ಕಾಲಕಾಲಕ್ಕೆ ಕಾನೂನು ತಿದ್ದುಪಡಿ ಮಾಡುವ ಅವಕಾಶವನ್ನು ಸಂವಿಧಾನವೇ ನೀಡಿದೆ. ಜನಪ್ರತಿನಿಧಿಗಳು, ಬಹುಮತದ ಸರ್ಕಾರ ಶಾಸನ ರೂಪಿಸುತ್ತದೆ. ಅದು, ಕೆಳಮನೆ, ಮೇಲ್ಮನೆಯಲ್ಲಿ ಚರ್ಚೆಯಾಗಿ ಅಂಗೀಕಾರವಾಗಬೇಕು. ಅದನ್ನು ರಾಜ್ಯಪಾಲರು ತಮ್ಮ ಅಂಕಿತದೊಂದಿಗೆ ಅಂಗೀಕರಿಸಬೇಕು, ನಂತರ ಕಾಯ್ದೆ ಜಾರಿಯಾಗಬೇಕು ಎಂಬುದು ಕ್ರಮ. ಅದಕ್ಕೆ ಅಡ್ಡಿಪಡಿಸುವುದು ಸಮಂಜಸವಲ್ಲ. ಈ ರೀತಿ ಮಾಡುವುದರಿಂದ ಶಾಸಕ ಸಭೆಗಳ ಮಹತ್ವ ಕಡಿಮೆ ಆಗುತ್ತದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇದರಲ್ಲಿ ರಾಜಕೀಯದ ದುರುದ್ದೇಶ ಕಾಣುತ್ತದೆ ಎಂದು ಶಾಸಕರು ಆರೋಪಿಸಿದ್ದಾರೆ.

ಅವರೇ ಪ್ರಮಾಣವಚನ ಬೋಧಿಸಿದ ಈ ಕಾಂಗ್ರೆಸ್ ಸರ್ಕಾರಕ್ಕೆ ಜನ ಬೆಂಬಲ ಇರುವ ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರಿಗೆ ವಿಶ್ವಾಸ ಇದ್ದಂತಿಲ್ಲ. ರಾಜ್ಯಪಾಲರು ನಡೆಯನ್ನು ನೋಡಿದರೆ, ದುರುದ್ದೇಶ ಪೂರ್ವಕವಾಗಿ ಸರ್ಕಾರಕ್ಕೆ ತೊಂದರೆ ಕಡುತ್ತಿರುವಂತೆ ಕಾಣುತ್ತಿದೆ. ಇವರು ಬಿಜೆಪಿ, ಮೈತ್ರಿ ಪಕ್ಷದ ಮಾತು ಕೇಳಿ ರಾಜ್ಯ ಸರ್ಕಾರದ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಏನೂ ಉಪಯೋಗವಾಗದು ಎಂದಿದ್ದಾರೆ.

ಕಾನೂನು ಹೋರಾಟದ ಎಚ್ಚರಿಕೆ:ರಾಜ್ಯದಲ್ಲಿ ಏಕ ಕಾಲದಲ್ಲಿ 11 ಮಸೂದೆಗಳಿಗೆ ಅಡ್ಡಿಪಡಿಸುವ ಮೂಲಕ ರಾಜ್ಯಪಾಲರು ಕರ್ನಾಟಕದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಕೇರಳ, ಮಹಾರಾಷ್ಟ್ರ, ಪಂಜಾಬ್‌ನಲ್ಲಿ ಇದೇ ರೀತಿ ಧೋರಣೆಯನ್ನು ಅಲ್ಲಿನ ರಾಜ್ಯಪಾಲರು ಅನುಸರಿಸಿದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಮಾಡಿ ಮಸೂದೆಗಳಿಗೆ ಅಂಗೀಕಾರ ಪಡೆಯಬೇಕಾಯಿತು. ಎಲ್ಲ ನಿರ್ಣಯಗಳೂ ಶಾಸನ ಸಭೆಯಲ್ಲೇ ಆಗಬೇಕು ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ. ಹಾಗಾಗಿ ಕರ್ನಾಟಕದ ರಾಜ್ಯಪಾಲರು ಮತ್ತೊಮ್ಮೆ ತಮ್ಮ ನಿರ್ಧಾರಗಳನ್ನು ಮರುಪರಿಶೀಲಿಸಬೇಕು. ಸಂವಿಧಾನದ ರಕ್ಷಕರಾದ ತಾವು ಪಕ್ಷಪಾತ ಧೋರಣೆಯನ್ನು ಅನುಸರಿಸಬಾರದು. ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳಿಗೆ ಅಂಕಿತ ಹಾಕಿ ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಅನಿವಾರ್ಯವಾಗಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಎಚ್ಚರಿಸಿದ್ದಾರೆ.

ಓದಿ:ನಿಮ್ಮ ಜೊತೆ ನಾವಿದ್ದೇವೆ ಹೋರಾಟ ಮಾಡಿ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಹೈಕಮಾಂಡ್ - Congress High Command

ABOUT THE AUTHOR

...view details