ಮಂಡ್ಯ:ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿಗೆ ಸಂಖ್ಯಾ ಬಲ ಇಲ್ಲ. ಹೀಗಾಗಿ ನಮ್ಮ ಶಾಸಕರನ್ನು ಸೆಳೆಯಲು ಆಮಿಷಗಳನ್ನು ಒಡ್ಡುತ್ತಿದ್ದಾರೆ. ಈ ಕುರಿತು ಕಾಂಗ್ರೆಸ್ ಪಕ್ಷದಿಂದ ದೂರು ದಾಖಲಿಸಿದ್ದೇನೆ. ಆದರೆ ನಮ್ಮ 139 ಶಾಸಕರೂ ಯಾವುದೇ ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರ ಬೆಂಬಲಿಗರು, ಪುತ್ರ, ಸಂಬಂಧಿಕರು, ಮಾಜಿ ಶಾಸಕರು ಸೇರಿಕೊಂಡು ನಮ್ಮ ಶಾಸಕರಿಗೆ ಹತ್ತು ಕೋಟಿ, ಐದು ಕೋಟಿ ಕೊಡ್ತೀವಿ ಎಂದು ಆಮಿಷ ನೀಡುತ್ತಿದ್ದಾರೆ. ನಮಗೆ ವೋಟು ಹಾಕದಿದ್ದರೆ ನೆಟ್ಟಗಿರಲ್ಲವೆಂದು ಬೆದರಿಕೆ ಹಾಕುತ್ತಿರುವ ಕುರಿತು ಸಿಎಂ ಡಿಸಿಎಂ ಗಮನಕ್ಕೂ ತರಲಾಗಿದೆ. ಕಾಂಗ್ರೆಸ್ ಪಕ್ಷದಿಂದ ದೂರು ದಾಖಲಿಸಿದ್ದೇನೆ. ನಮ್ಮ ಶಾಸಕರಿಗೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ. 139 ಶಾಸಕರು ಒಗ್ಗಟ್ಟಾಗಿದ್ದು, ಯಾವುದೇ ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ರಾಜ್ಯಸಭಾ ಚುನಾವಣೆ ಹಿನ್ನೆಲೆ ಕೈ ಶಾಸಕರು ರೆಸಾರ್ಟ್ಗೆ ಹೋಗುವ ವಿಚಾರ ಕುರಿತು ಮಾತನಾಡಿದ ಅವರು, ಸೋಮವಾರದವರೆಗೆ ವಿಧಾನಸಭೆ ಕಲಾಪ ನಡೆಯುತ್ತಿದೆ. ಮಂಗಳವಾರ ರಾಜ್ಯಸಭೆ ಚುನಾವಣೆ ಇದೆ. ಇವುಗಳ ಮಧ್ಯೆ ರೆಸಾರ್ಟ್ಗೆ ಹೋಗಲು ಹೇಗೆ ಸಾಧ್ಯವಿದೆ?. ಕಾಂಗ್ರೆಸ್ ಶಾಸಕರು ಯಾವ ರೆಸಾರ್ಟ್ಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.