ಬೆಳಗಾವಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ (92) ಅವರು ನಿಧನರಾದ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕಾಂಗ್ರೆಸ್ನ ರಾಷ್ಟ್ರ ಹಾಗೂ ರಾಜ್ಯದ ನಾಯಕರು ದೆಹಲಿಗೆ ತೆರಳುತ್ತಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಅಗಲಿದ ಆರ್ಥಿಕ ತಜ್ಞರಿಗೆ ಸಂತಾಸ ಸೂಚಿಸಿದರು.
ಸಿಂಗ್ ಹೃದಯ, ಮನಸ್ಸು ಬಹಳ ವಿಶಾಲವಾದದ್ದು: ಸಂಸದ ಡಾ. ಶಶಿತರೂರ್ ಮಾತನಾಡಿ, ''ಇದು ಅತ್ಯಂತ ದುಃಖದ ವಿಚಾರ. ಮನಮೋಹನ್ ಸಿಂಗ್ ಅವರು ಹಲವು ವರ್ಷಗಳಿಂದ ನನಗೆ ಗೊತ್ತು. ದೆಹಲಿಯಲ್ಲಿ ಕೆಲಸ ಮಾಡುವಾಗ ಅವರು ಸೌಥ್ ಕಮಿಷನ್ ಅಧ್ಯಕ್ಷರಿದ್ದರು. ದೊಡ್ಡ ವ್ಯಕ್ತಿತ್ವ ಅವರದ್ದು. ಪ್ರಧಾನಿಯಾದ ಬಳಿಕ ನಮ್ಮ ಸಂಪರ್ಕ ಬಹಳ ಹತ್ತಿರವಾಗಿತ್ತು. ಸೋನಿಯಾ ಗಾಂಧಿ ಸಮ್ಮುಖದಲ್ಲಿ ರಾಜಕೀಯಕ್ಕೆ ಅವರೇ ನನ್ನನ್ನು ಕರೆದುಕೊಂಡರು. ನಮ್ಮನ್ನು ಬಿಟ್ಟು ಹೋಗಿದ್ದರಿಂದ ಬಹಳ ದುಃಖ ಇದೆ. ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಿದ್ದರು. ದೇಶದಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಹಾಗೂ ಬದಲಾವಣೆ ಆಗಿದೆ. ಅವರ ಹೃದಯ ಮತ್ತು ಮನಸ್ಸು ಬಹಳ ವಿಶಾಲವಾದದ್ದು. ದೊಡ್ಡ ಮನಸಿನಿಂದ ಕೆಲಸ ಮಾಡಿದ್ದರು. ದೊಡ್ಡ ವ್ಯಕ್ತಿ ನಮ್ಮನ್ನು ಬಿಟ್ಟು ಹೋಗಿದ್ದಾರೆ'' ಎಂದು ನೆನಪು ಮಾಡಿಕೊಂಡರು.
ಬೆಳಗಾವಿಯಲ್ಲಿ ಇಂದು ಆಯೋಜಿಸಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹಲವಾರು ರಾಷ್ಟ್ರೀಯ ನಾಯಕರು, ವಿವಿಧ ರಾಜ್ಯಗಳ ಸಂಸದರು ಸೇರಿ ಕಾರ್ಯಕಾರಿ ಸದಸ್ಯರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಸ್ನಲ್ಲಿ ಆಗಮಿಸಿದ್ದು, ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.