ಬೆಂಗಳೂರು:ಕೋಲಾರದ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ವಹಿಸುವಂತೆ ಕೋರಿ ಮೃತರ ಪತ್ನಿ ಡಾ.ಎಸ್.ಚಂದ್ರಕಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಆದೇಶ ಕಾಯ್ದಿರಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಇದೊಂದು ನಿಗೂಢ ಕೊಲೆ ಪ್ರಕರಣ. ಯಾರು, ಏತಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬ ಅಂಶಗಳು ರಹಸ್ಯವಾಗಿ ಉಳಿದಿವೆ. ಪ್ರಕರಣವನ್ನು ಮೊದಲು ಸ್ಥಳೀಯ ಪೊಲೀಸರು 37 ದಿನಗಳ ಕಾಲ ತನಿಖೆ ನಡೆಸಿದರು. ನಂತರ ಅರ್ಜಿದಾರರು ಸಿಬಿಐಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ರಾಜ್ಯ ಸರ್ಕಾರವು ಸಿಬಿಐಗೆ ನೀಡುವುದರ ಬದಲಿಗೆ ಸಿಐಡಿಗೆ ಹಸ್ತಾಂತರಿಸಿತು. ಸಿಐಡಿ ಪ್ರಕರಣವನ್ನು 50 ದಿನಗಳ ಕಾಲ ತನಿಖೆ ನಡೆಸಿ ಬಳಿಕ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ಆದರೆ ದೋಷಾರೋಪಟ್ಟಿಯಲ್ಲಿ ಹಲವಾರು ಅನುಮಾನಗಳಿವೆ ಎಂದು ಪೀಠಕ್ಕೆ ವಿವರಿಸಿದರು.
ಅಲ್ಲದೆ, ಪೂರ್ಣ ದೋಷಾರೋಪಪಟ್ಟಿಯಲ್ಲಿ 23 ತಪ್ಪುಗಳು ಸ್ಪಷ್ಟವಾಗಿ ತಿಳಿದುಬರುತ್ತದೆ. ಪ್ರಕರಣದಲ್ಲಿ 9 ಜನ ಆರೋಪಿಗಳಿದ್ದಾರೆ ಎಂದು ಹೇಳಲಾಗಿದೆ. ದೋಷಾರೋಪಪಟ್ಟಿಯಲ್ಲಿ ಇದು ಸುಪಾರಿ ನೀಡಿ ಕೊಲೆಗೈದಿರುವುದೋ ಅಥವಾ ಇಲ್ಲವೋ ಎಂಬ ವಿವರಣೆ ನೀಡಿಲ್ಲ. ಪ್ರಕರಣ ಸಂಬಂಧ ಅರ್ಜಿದಾರರು ತಮಗೆ ಇಂಥವರ ಮೇಲೆ ಸಂದೇಹವಿದೆ ಎಂಬುದಾಗಿ ಸಿಐಡಿಗೆ ದೂರು ನೀಡಿದರೂ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿಲ್ಲ. ಘಟನೆ ಸಂಬಂಧ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಘಟನೆ ಸಂಭವಿಸಿದ ಐದು ದಿನದ ಬಳಿಕ ದಾಖಲಿಸಲಾಗಿದೆ. ಆರೋಪಿಗಳು ಕೃತ್ಯ ಎಸಗುವ ಮೊದಲು ಮದ್ಯಪಾನ ಮಾಡಿದ್ದಾರೆ ಎಂದು ಸ್ವಯಂ ಹೇಳಿಕೆ ನೀಡಿದ್ದಾರೆ. ಆದರೆ ಇದಕ್ಕೆ ಪೂರಕವಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವ ಬಗ್ಗೆ ಪ್ರಯತ್ನ ಮಾಡಿಲ್ಲ. ಸ್ಥಳ ಮಹಜರು (ಪಂಚನಾಮೆ ನಡೆಸುವ) ವೇಳೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲಿಸುವಲ್ಲಿ ಎಡವಿದ್ದಾರೆ. ಪೆಪ್ಪರ್ ಸ್ಪೈ ಬಳಸಿರುವುದಾಗಿ ಆರೋಪಿಗಳು ಖುದ್ದು ಹೇಳಿಕೆ ನೀಡಿದ್ದಾರೆ. ಅವರ ಅದನ್ನು ಎಲ್ಲಿಂದ ಖರೀದಿ ಮಾಡಿದ್ದರು? ಹೇಗೆ ಬಳಕೆ ಮಾಡಿದ್ದರು? ಎಂಬ ಬಗ್ಗೆ ಎಲ್ಲಿಯೂ ವಿವರಣೆ ಇಲ್ಲ. ಆರೋಪಿಗಳ ಸಂಭಾಷಣೆ (ಸಿಡಿಆರ್)ಕಲೆ ಹಾಕಿಲ್ಲ. ತನಿಖೆಯ ಯಾವ ಹಂತದಲ್ಲೂ ಪ್ರಕರಣ ಸಾಬೀತುಪಡಿಸುವ ವೈಜ್ಞಾನಿಕ ಪುರಾವೆಗಳಿಲ್ಲ. ಇದೊಂದು ಅತ್ಯಂತ ಕಳಪೆಸಹಿತ ದೋಷಾರೋಪಪಟ್ಟಿ ಎಂದು ಹೇಳಿದರು. ಪ್ರಕರಣವನ್ನು ಸಿಬಿಐ ತನಿಖೆ ನೀಡಬೇಕೆಂದು ಸಿಎಂಗೆ ಹಾಗೂ ಗೃಹಸಚಿವರಿಗೆ ಪತ್ರ ಬರೆಯಲಾಗಿದೆ. ಆದರೆ ಅವರು ಸೂಕ್ತ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದ ಸತ್ಯ-ಅಸತ್ಯತೆಗಳನ್ನು ಅರಿತು ಸಿಬಿಐ ತನಿಖೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.