ಬೆಂಗಳೂರು: ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಇಬ್ಬರು ಬಲಾಢ್ಯರು ನಾಯಕತ್ವ ವಹಿಸಿದ್ದರು. ಕನಿಷ್ಠ ಪಕ್ಷ ಕಾಂಗ್ರೆಸ್ಗೆ 15ರಿಂದ 18, 20 ಸ್ಥಾನ ಬರುತ್ತವೆ ಎಂಬ ನಿರೀಕ್ಷೆ ಇತ್ತು. ಆದರೆ, ಜವಾಬ್ದಾರಿ ತೆಗೆದುಕೊಂಡಿರುವಂತವರು ಪಕ್ಷಕ್ಕೆ ಅನುಕೂಲ ಮಾಡದಿರುವ ಸಂದರ್ಭದಲ್ಲಿ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕಲ್ವಾ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಮಾರ್ಮಿಕವಾಗಿ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಿಎಂ, ಡಿಸಿಎಂ ಬದಲಾವಣೆ ಕುರಿತು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಏಕಾಏಕಿ ಚರ್ಚೆಗೆ ಬರಲು ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ. ಬಹುಶಃ ಲೋಕಸಭೆ ಚುನಾವಣಾ ಫಲಿತಾಂಶದ ನೋಡಿ ಕೆಲವರು ಆ ವಿಚಾರಗಳನ್ನು ತೆಗೆದಿರಬಹುದು. ಯಾಕೆಂದರೆ, ಚುನಾವಣೆಗೂ ಮುನ್ನ ಡಿಸಿಎಂ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಎಲ್ಲ ವರ್ಗದವರನ್ನು ಜೊತೆಗೆ ತೆಗೆದುಕೊಂಡು ಹೋಗಲು ಉಪಮುಖ್ಯಮಂತ್ರಿ ಸ್ಥಾನ ಮತ್ತೊಂದಷ್ಟು ಸಮುದಾಯಗಳಿಗೆ ಬೇಕು ಎಂದಿದ್ದರು. ಈಗ ಫಲಿತಾಂಶ ಬಂದ ನಂತರ ಆಗಿರುವುದನ್ನು ನೋಡಿದಾಗ, ಎಲ್ಲೋ ನಾವು ಎಡವಿದ್ದೇವೆ ಎಂದು ಅವರಿಗೆ ಅನಿಸಬಹುದು. ಅದಕ್ಕೆ ತಮ್ಮ ಬೇಡಿಕೆಯನ್ನು ಪುನರುಚ್ಛಾರ ಮಾಡುತ್ತಿರಬಹುದು ಎಂದು ಅಭಿಪ್ರಾಯ ಪಟ್ಟರು.
ಮುಂದುವರೆದು, ಜವಾಬ್ದಾರಿ ತೆಗೆದುಕೊಂಡಿರುವಂತವರು ಪಕ್ಷಕ್ಕೆ ಅನುಕೂಲ ಮಾಡದಿರುವ ಸಂದರ್ಭದಲ್ಲಿ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕಲ್ವಾ?. ಚುನಾವಣಾ ಫಲಿತಾಂಶದ ಬಹಳಷ್ಟು ನಿರೀಕ್ಷೆಯಲ್ಲಿದ್ದರು. ಕರ್ನಾಟಕದಲ್ಲಿ ಇಬ್ಬರು ಬಲಾಢ್ಯರು ನಾಯಕತ್ವ ವಹಿಸಿದ್ದಾರೆ. ಕನಿಷ್ಠ ಪಕ್ಷ 15ರಿಂದ 18, 20 ಸ್ಥಾನ ಬರುತ್ತವೆ ಎಂಬ ನಿರೀಕ್ಷೆ ಇತ್ತು. ರಾಹುಲ್ ಗಾಂಧಿ ಅವರಿಗೆ ದೇಶದ ನಾಯಕತ್ವ ವಹಿಸಲು ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಬ್ಲಾಕ್ ಮಟ್ಟದ ಕಾರ್ಯಕರ್ತರು ಸಹ ಹೋರಾಟ ಮಾಡುತ್ತಿದ್ದರು. ಆದರೆ, ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದರು.