ಬೆಳಗಾವಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾಹಿತಿ ನೀಡಿದರು.
ನಗರದಲ್ಲಿಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಮೂರು ಸಾವಿರದಷ್ಟು ವಿಡಿಯೋಗಳನ್ನು ಮಾಡಲಾಗಿದೆ. ಅಲ್ಲದೇ, ಅವರದ್ದೆ ಕುಟುಂಬದಿಂದಲೇ ಓರ್ವ ಮಹಿಳೆಯನ್ನುಅಪಹರಣ ಮಾಡಲಾಗಿದೆ. ಇವರ ವಿರುದ್ಧ ಸೂಕ್ತ ಕ್ರಮವಾಗಬೇಕು. ಅಲ್ಲದೇ, ಕಳೆದ 75 ವರ್ಷಗಳಲ್ಲಿ ದೇಶದ ಇತಿಹಾಸದಲ್ಲಿ ಇಂತಹದ್ದೊಂದು ಪ್ರಕರಣ ನಡೆದಿರಲಿಲ್ಲ. ಈ ಪ್ರಕರಣದ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಕೊಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ ಎಂದು ಹೇಳಿದರು.
ಮೋದಿ, ಅಮಿತ್ ಶಾಗೆ 10 ಪ್ರಶ್ನೆ: ಇದೇ ವೇಳೆ, ಈಗ ಪ್ರಜ್ವಲ್ ರೇವಣ್ಣ ಎಂಬ ಪದವನ್ನು ಬಳಸಲು ಯಾಕೆ ದೇಶದ ಪ್ರಧಾನಿ ಹೆದರುತ್ತಿದ್ದಾರೆ ಎಂದು ಪ್ರಶ್ನಿಸಿದ ಸುರ್ಜೇವಾಲಾ, ಈ ಪ್ರಕರಣದ ಸಂಬಂಧ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರಮುಖ ಹತ್ತು ಪ್ರಶ್ನೆಗಳನ್ನು ಕೇಳಿದರು.
''ಪ್ರಧಾನಿ ಮೋದಿಯವರು ಜೆಡಿಎಸ್ ನಾಯಕ, ಓರ್ವ ಬಲತ್ಕಾರಿಗೆ ರಕ್ಷಣೆ ನೀಡುತ್ತಿದ್ದಾರೆ. ತಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗಂಭೀರವಾದ ಮತ್ತು ನೂರಾರು ಮಹಿಳೆಯರ ಮೇಲಿನ ದೌರ್ಜನ್ಯದ ಆರೋಪಿ ಎಂದು ಮೊದಲೇ ಗೊತ್ತಿತ್ತು. ಮೋದಿ, ಅಮಿತ್ ಶಾ ಅವರಿಗೆ ಬಿಜೆಪಿ ನಾಯಕರೊಬ್ಬರೇ ಡಿಸೆಂಬರ್ನಲ್ಲೇ ಎಲ್ಲ ಪುರಾವೆಗಳನ್ನು ಒದಗಿಸಿದ್ದರು. ಆದರೂ, ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು ಯಾಕೆ?, ಪ್ರಜ್ವಲ್ ರೇವಣ್ಣ ಅವರನ್ನು ಬಿಜೆಪಿ-ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದ್ದೇಕೆ?, ಮೋದಿ ಅವರು ಪ್ರಜ್ವಲ್ ರೇವಣ್ಣ ಕೈಹಿಡಿದುಕೊಂಡು, ಪ್ರಜ್ವಲ್ ರೇವಣ್ಣರನ್ನು ಗೆಲ್ಲಿಸುವುದರಿಂದ ನನಗೆ ಶಕ್ತಿ ಬರುತ್ತದೆ ಎಂದು ಹೇಳಿದ್ದೇಕೆ?, ಪ್ರಜ್ವಲ್ ರೇವಣ್ಣ ಬಗ್ಗೆ ಎಲ್ಲ ಗೊತ್ತಿದ್ದೂ ಸಹ ಮೋದಿ, ಅಮಿತ್ ಹಾಗೂ ಬಿಜೆಪಿ ಈ ವಿಷಯವನ್ನು ಯಾಕೆ ಮುಚ್ಚಿಟ್ಟಿದ್ದರು'' ಎಂದು ಪ್ರಶ್ನಿಸಿದರು.