ಬೆಂಗಳೂರು:"ನಿನ್ನೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನೀವೇ ನೋಡಿದೀರಿ. ನಮ್ಮ ನಾಯಕರು, ಬಿಜೆಪಿ ನಾಯಕರು ಬಂದು ಶಕ್ತಿ ತುಂಬಿದ್ದಾರೆ. ಈ ಸರ್ಕಾರ ದಬ್ಬಾಳಿಕೆ ಮಾಡ್ತಿದೆ. ಜನ ಶುಕ್ರವಾರ ಕಾರ್ಯಕ್ರಮಕ್ಕೆ ಬರಬಾರದಾ?. ನಿನ್ನೆಯೂ ಒಂದು ಕೇಸ್ ಹಾಕಿದ್ದಾರೆ. ಚನ್ನಪಟ್ಟಣದಲ್ಲಿ ಯಾವ ಚುನಾವಣಾ ನಡೆಸೋಕೆ ಹೊರಟಿದ್ದಾರೆ. ನಿನ್ನೆ ನಮ್ಮ ಪಕ್ಷದ ಅಧ್ಯಕ್ಷನಿಗೆ ನೋಟಿಸ್ ಕೊಟ್ಟಿದ್ದಾರೆ. ಅಲ್ಲಿ ಚುನಾವಣೆ ಯಾವ ರೀತಿ ನಡೆಸಬಹುದು ಅಂತ ಊಹಿಸಬಹುದು" ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪದ್ಮನಾಭನಗರದ ಹೆಚ್.ಡಿ.ದೇವೇಗೌಡರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯಿಸಿದರು. "ಬಹುಶಃ ನಿನ್ನೆ ನೀವು ಎಲ್ಲಾ ನೋಡಿದ್ದೀರಾ. ಕೊನೆ ಹಂತದವರೆಗೆ ರಾಜಕೀಯ ಬೆಳವಣಿಗೆ ನಡೆಯಿತು. ಕೊನೆ ಗಳಿಗೆಯಲ್ಲಿ ನಿಖಿಲ್ ಕುಮಾರಸ್ವಾಮಿ ನಿಲ್ಲಿಸುವ ಪರಿಸ್ಥಿತಿಗೆ ಕಾಂಗ್ರೆಸ್ ನಾಯಕರೇ ದೂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ನಿಲ್ಲಬಾರದು ಅಂತ ಇದ್ದರು. ಮೊನ್ನೆ ಸಂಜೆ ತೀರ್ಮಾನ ಆಗಿದ್ದು" ಎಂದು ಹೇಳಿದರು.
"ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ ಇದೆ. ಬಿಜೆಪಿ ಕಚೇರಿಯಲ್ಲಿ ಚನ್ನಪಟ್ಟಣ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರು ಮೂರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಹೋರಾಟ ಮಾಡುತ್ತೇವೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಶಿಗ್ಗಾಂವಿ, ಸಂಡೂರಿಗೆ ಹೋಗಿ ಬಂದಿದ್ದಾರೆ" ಎಂದು ಹೇಳಿದರು.