ಕಾಂಗ್ರೆಸ್ ಅಭ್ಯರ್ಥಿಗೆ ಶಾಮನೂರು ಕುಟುಂಬದ ಕುಡಿಗಳ ಸಾಥ್ ದಾವಣಗೆರೆ:2023ನೇ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪರ ಭರ್ಜರಿ ಪ್ರಚಾರ ಮಾಡಿ ಗೆಲುವಿಗೆ ರುವಾರಿಯಾಗಿದ್ದ ಶಾಮನೂರು ಮನೆತನದ ಕುಡಿಗಳು ಇದೀಗ ತಾಯಿ ಪ್ರಭಾ ಅವರ ಪರ ಮತಯಾಚಿಸಲು ಸನ್ನದ್ಧರಾಗಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ಪುತ್ರ ಸಮರ್ಥ್ ಶಾಮನೂರು ಈಗಾಗಲೇ ಪ್ರಚಾರ ಆರಂಭಿಸಿದ್ದು, ಇತ್ತ ಮಗಳು ಶ್ರೇಷ್ಠಾ ಶಾಮನೂರು ಕೂಡ ತಾಯಿ ಪ್ರಭಾಗೆ ಸಾಥ್ ನೀಡಲಿದ್ದಾರೆ.
ಇದೇ ತಿಂಗಳ 12ರ ನಂತರ ಉಮೇದುವಾರಿಕೆ ಸಲ್ಲಿಕೆಯಾದ ಬಳಿಕ ಶಾಮನೂರು ಶಿವಶಂಕರಪ್ಪ ಮನೆ ಮಕ್ಕಳು ಕಾಂಗ್ರೆಸ್ ಅಭ್ಯರ್ಥಿ ತಮ್ಮ ತಾಯಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ಮತಯಾಚಿಸಲಿದ್ದಾರೆ ಎಂದು ಪ್ರಭಾ ಅವರು ಖಾತ್ರಿಪಡಿಸಿದ್ದಾರೆ. ಪುತ್ರ ಸಮರ್ಥ್ ಶಾಮನೂರು ಅವರು ಪ್ರತಿಯೊಂದು ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಸಭೆ ಸಮಾರಂಭಗಳಲ್ಲಿ ತಮ್ಮ ತಾಯಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಂಗಳವಾರ ನಡೆದ ಹರಿಹರ ಕ್ಷೇತ್ರದ ಮುಖಂಡರ ಸಭೆಯಲ್ಲಿ ಭಾಗಿಯಾಗಿ ತಾಯಿ ಪ್ರಭಾ ಅವರಿಗೆ ಸಾಥ್ ನೀಡಿದರು. ಇನ್ನು ಪುತ್ರಿ ಶ್ರೇಷ್ಠ ಎಂಬಿಬಿಎಸ್ ವಿದ್ಯಾರ್ಥಿ ಆಗಿದ್ದು, ಕೆಲವೇ ದಿನಗಳಲ್ಲಿ ಪ್ರಚಾರಕ್ಕಿಳಿದು ತಾಯಿಗೆ ಶಕ್ತಿ ತುಂಬಲಿದ್ದಾರೆ.
ಮಕ್ಕಳ ಪ್ರಚಾರ ಕುರಿತು ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ:"ನನ್ನ ಪರ ನನ್ನ ಪುತ್ರ ಸಮರ್ಥ್ ಪ್ರಚಾರ ಮಾಡುತ್ತಿದ್ದಾನೆ. ದಾವಣಗೆರೆ ಅಭಿವೃದ್ಧಿ ಆಗಬೇಕಾಗಿದೆ ಎಂದು ಸಮರ್ಥ್ ಚಿಂತನೆ ಮಾಡಿ ಈ ಕೆಲಸ ಮಾಡುತ್ತಿದ್ದಾನೆ. ರಾಜಕೀಯ ಅವನ ರಕ್ತದಲ್ಲಿ ಬಂದಿದೆ. ಅಜ್ಜ ಮುತ್ತಜ್ಜ, ಮಲ್ಲಿಕಾರ್ಜುನ್ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದು ದುಡಿಯುತ್ತಿದ್ದಾರೆ. ರಾಜಕೀಯ ಎಂಬುವುದು ನಮಗೆ ಹೊಸದೇನೂ ಅಲ್ಲ, ಮಕ್ಕಳು ಪ್ರಚಾರದಲ್ಲಿ ನನಗೆ ಸಾಥ್ ನೀಡಿಲಿದ್ದಾರೆ. ದಾವಣಗೆರೆ ಅಭಿವೃದ್ಧಿಗೆ ಸಮರ್ಥ್ ಒಬ್ಬ ಪ್ರಬುದ್ಧ ಮತದಾರರನಾಗಿ ವೋಟರ್ಸ್ಗೆ ಮನವರಿಕೆ ಮಾಡುತ್ತಿದ್ದಾನೆ. ತಾತ ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗೆ ಹರಕೆ ಮಾಡಿಕೊಂಡು ಚಪ್ಪಲಿ ಇಲ್ಲದೇ ಬರಿ ಕಾಲಿನಲ್ಲಿ ಪ್ರಚಾರ ಮಾಡಿದ್ದನು. ಇದೀಗ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ನನಗೆ ಟಿಕೆಟ್ ಘೋಷಣೆಯಾದಾಗಿನಿಂದ ಸಮರ್ಥ್ಗೆ ಆ ರೀತಿ ಎಲ್ಲ ಮಾಡಬೇಡಪ್ಪ ಎಂದು ತಾಕೀತು ಮಾಡಿದ್ದೇನೆ. ಎಲ್ಲ ಹರಕೆ ನಿನ್ನ ಕ್ರಿಯಾಶೀಲತೆ ಮೇಲೆ ಹಾಕು ಎಂದು ಹೇಳಿದ್ದೇನೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಇದನ್ನೂ ಓದಿ:ಶಾಮನೂರು ಶಿವಶಂಕರಪ್ಪ ಮಹಿಳೆಯರ ಬಗ್ಗೆ ಸಣ್ಣತನದ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು: ಗಾಯತ್ರಿ ಸಿದ್ದೇಶ್ವರ್ - DAVANAGERE LOK SABHA CONSTITUENCY